ದುಬಾೖ: ಸಂಯುಕ್ತ ಅರಬ್ ಗಣರಾಜ್ಯದ ರಾಜಧಾನಿ ದುಬಾೖಯಲ್ಲಿರುವ ಭಾರತೀಯರಿಗೆ ಈ ಬಾರಿಯ ದಸರೆ ವಿಶೇಷವಾಗಿ ನೆನಪಲ್ಲಿ ಉಳಿಯಲಿದೆ. ಜೆಬೆಲ್ ಅಲಿ ಎಂಬಲ್ಲಿ ನಿರ್ಮಾಣಗೊಳ್ಳುತ್ತಿರುವ ದೇಗುಲ ಅ.4ರಂದು (ವಿಜಯದಶಮಿ) ಲೋಕಾರ್ಪಣೆಗೊಳ್ಳಲಿದೆ.
ನಿರ್ಮಾಣ ಕಾರ್ಯಮುಕ್ತಾಯಗೊಂಡಿದ್ದು, ಅಂತಿಮ ಹಂತದ ಕಾಮಗಾರಿಗಳು ನಡೆದಿವೆ. ಹೊಸ ದೇಗುಲದಲ್ಲಿ ಒಟ್ಟು 16 ದೇವರು ವಿಗ್ರಹಗಳನ್ನು ಸ್ಥಾಪಿಸಲಾಗುತ್ತದೆ. ಅ.5ರಿಂದ ಸಾರ್ವಜನಿಕರು ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ನವರಾತ್ರಿಯ ಸಮಯ ದಲ್ಲಿ ದೇಗುಲದ ಪೂಜಾ ಸ್ಥಳ ಮಾತ್ರವೇ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.
2023ರ ಜ.14ರ ಮಕರ ಸಂಕ್ರಾಂತಿಗೆ ಜ್ಞಾನ ಕೊಠಡಿ, ಸಮುದಾಯ ಕೇಂದ್ರಗಳು ಸಾರ್ವ ಜನಿಕರಿಗೆ ಮುಕ್ತವಾಗಲಿದೆ.
ದೇಗುಲದಲ್ಲಿ ಏನಿದೆ?: ಅಮೃತಶಿಲೆಯಲ್ಲಿ ನಿರ್ಮಿಸಲಾಗಿರುವ ದೇಗುಲದಲ್ಲಿ ಒಂದು ಜ್ಞಾನ ಕೊಠಡಿ, 1 ಸಮುದಾಯ ಕೇಂದ್ರವಿರಲಿದೆ. ಜ್ಞಾನ ಕೊಠಡಿ ಹಾಗೂ ಸಮುದಾಯ ಕೇಂದ್ರಗಳಲ್ಲಿ ಎಲ್‌ಸಿಡಿ ಸ್ಕ್ರೀನ್ ಅಳವಡಿಸಲಾಗಿರುತ್ತದೆ. ಮದುವೆ ಇತ್ಯಾದಿ ಕಾರ್ಯಕ್ರಮ ಆಯೋಜಿಸಲೂ ಪ್ರತ್ಯೇಕ ಸಭಾಭವನವಿರಲಿದೆ.
ಶಿವನೇ ಪ್ರಮುಖ ದೇವರು: ದೇಗುಲದಲ್ಲಿ ಶಿವನನ್ನೇ ಮುಖ್ಯ ದೇವರನ್ನಾಗಿಸ್ಥಾಪಿಸಲಾಗುವುದು. ಉಳಿದಂತೆ ಕೃಷ್ಣ, ಗಣೇಶ, ಪಾರ್ವತಿ ಹಾಗೆಯೇ ದಕ್ಷಿಣ ಭಾರತದಪ್ರಸಿದ್ಧ ದೇವರಾದ ಅಯ್ಯಪ್ಪ ಸೇರಿ ಅನೇಕ ದೇವರುಗಳನ್ನು ಪ್ರತಿಷ್ಠಾಪಿಸಲಾಗುವುದು. 10-12 ಪುರೋಹಿತರು ದೇವರ ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಕನಿಷ್ಠ 8 ಭಕ್ತರು ದೇಗುಲದ ಪೂರ್ಣಾವಧಿ ನೌಕರರಾಗಿ ಕೆಲಸ ಮಾಡಲಿದ್ದಾರೆ.