ದುಬೈ: ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ತನ್ನ ವೀಸಾ ನೀತಿಯಲ್ಲಿ ಕೊಂಚ ಬದಲು ಮಾಡಿಕೊಂಡಿದೆ. ಬಂಡವಾಳ ಹೂಡಿಕೆ ಮಾಡುವವರು, ವೈದ್ಯರು, ವಿಜ್ಞಾನಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಪೌರತ್ವ ನೀಡುವುದಾಗಿ ಪ್ರಕಟಿಸಿದೆ.
ಇದರಿಂದಾಗಿ ಭಾರತ ಮತ್ತು ಇತರ ದೇಶಗಳ ವೃತ್ತಿಪರರಿಗೆ ಅನುಕೂಲವಾಗಲಿದೆ. ದುಬೈನ ರಾಜ, ಯುಎಇಯ ಪ್ರಧಾನಿ, ಉಪಾಧ್ಯಕ್ಷರೂ ಆಗಿರುವ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ.
1971ರಲ್ಲಿ ಈ ದೇಶ ನಿರ್ಮಾಣವಾಗಲು ಶ್ರಮಿಸಿದ ಪ್ಯಾಲಸ್ತೀನ್ ಪ್ರಜೆಗಳಿಗೆ ಈ ಹಿಂದೆಯೇ ಪೌರತ್ವ ನೀಡಲಾಗಿದೆ. ಇದೀಗ ದೇಶದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲು ಹೊಸತಾಗಿ ಪೌರತ್ವ ನೀಡುವ ಗುರಿ ಹೊಂದಿದೆ.
ಇದನ್ನೂ ಓದಿ:ಇಸ್ರೇಲಿ ರಾಯಭಾರ ಕಚೇರಿ ಬಳಿ ಸ್ಫೋಟದ ವೇಳೆ 45 ಸಾವಿರ ಮೊಬೈಲ್‌ಗಳು ಸಕ್ರೀಯ!
ಮಖ್ತೂಮ್ ಹೇಳಿಕೆಯ ಪ್ರಕಾರ, ಕಲಾವಿದರು, ಲೇಖಕರು, ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು ಮತ್ತವರ ಕುಟುಂಬವರ್ಗಕ್ಕೆ ಪೌರತ್ವ ಸಿಗಲಿದೆ. ಈ ಪೌರತ್ವ ಪಡೆದವರು ತಮ್ಮ ದೇಶದ ಪೌರತ್ವವನ್ನು ಉಳಿಸಿಕೊಳ್ಳಲೂ ಅವಕಾಶವಿರಲಿದೆ. ಯಾರಿಗೆ ಪೌರತ್ವ ನೀಡಬೇಕೆಂಬ ಬಗ್ಗೆ ದೇಶದ 7 ಸಂಸ್ಥಾನಗಳ ಪಾರಂಪರಿಕ ಆಡಳಿತಾಧಿಕಾರಿಗಳು ನಾಮನಿರ್ದೇಶನ ಮಾಡಲಿದ್ದಾರೆ. ಅದನ್ನು ಆಧರಿಸಿ ಮುಂದಿನ ತೀರ್ಮಾನವಾಗಲಿದೆ. ಸದ್ಯ ಆ ದೇಶದಲ್ಲಿ 90 ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಇದರಲ್ಲಿ ಶೇ.10ರಷ್ಟು ಮಂದಿ ಮಾತ್ರ ಆ ದೇಶದ ಪೌರತ್ವ ಹೊಂದಿದ್ದಾರೆ.