ಕೂಲಿಜ್ (ಆಂಟಿಗಾ): ಶನಿವಾರದ ಅಂಡರ್-19 ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಘಾತಕ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ಹಾಲಿ ಚಾಂಪಿಯನ್ ಬಾಂಗ್ಲಾದೇಶವನ್ನು ಸಣ್ಣ ಮೊತ್ತಕ್ಕೆ ಹಿಡಿದು ನಿಲ್ಲಿಸಿದೆ. ಬ್ಯಾಟಿಂಗಿಗೆ ಇಳಿಸಲ್ಪಟ್ಟ ಬಾಂಗ್ಲಾ 37 ಓವರ್‌ಗಳಲ್ಲಿ 111 ರನ್ನಿಗೆ ಸರ್ವಪತನ ಕಂಡಿದೆ.
ಬಾಂಗ್ಲಾ ಪಡೆ ಆರಂಭದಲ್ಲಿ ಎಡಗೈ ಮಧ್ಯಮ ವೇಗಿ ರವಿಕುಮಾರ್ (14ಕ್ಕೆ 3), ಬಳಿಕ ಎಡಗೈ ಸ್ಪಿನ್ನರ್ ವಿಕ್ಕಿ ಓಸ್ತ್ ವಾಲ್ (25ಕ್ಕೆ 2) ಬೌಲಿಂಗ್ ಆಕ್ರಮಣಕ್ಕೆ ಸಿಲುಕಿತು. ಯಾವ ಹಂತದಲ್ಲೂ ಚೇತರಿಕೆಯ ಲಕ್ಷಣ ತೋರಲಿಲ್ಲ. ಒಂದೊಂದು ರನ್ನಿಗೂ ಅದು ಪರದಾಟ ನಡೆಸಿತು.
ಮೊದಲ ಬೌಂಡರಿ ಬಂದದ್ದೇ 13ನೇ ಓವರ್‌ನಲ್ಲಿ ಎಂಬುದು ಚಾಂಪಿಯನ್ನರ ಅವಸ್ಥೆಗೆ ಸಾಕ್ಷಿ.ರವಿಕುಮಾರ್ ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಬೇಟೆಗೆ ತೊಡಗಿ ಬಾಂಗ್ಲಾದ ಮೇಲೆ ಒತ್ತಡ ಹೇರುತ್ತ ಹೋದರು. 14 ರನ್ ಆಗುವಷ್ಟರಲ್ಲಿ 3 ವಿಕೆಟ್ ಉದುರಿತು. ವಿಕ್ಕಿ ಓಸ್ತ್ವಾಲ್ ಒಂದೇ ಓವರ್‌ನಲ್ಲಿ 2 ವಿಕೆಟ್ ಹಾರಿಸಿ ಬಾಂಗ್ಲಾ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದರು. 16 ಓವರ್ ಮುಗಿಯುವುದರೊಳಗೆ 37 ರನ್ನಿಗೆ ಅರ್ಧದಷ್ಟು ಮಂದಿಯ ಆಟ ಕೊನೆಗೊಂಡಿತ್ತು.
8ನೇ ವಿಕೆಟಿಗೆ ಜತೆಗೂಡಿದ ಎಸ್.ಎಂ. ಮೆಹರೂಬ್ ಮತ್ತು ಅಶ್ಫಿಕರ್ ಜಮಾನ್ 70 ಎಸೆತಗಳಿಂದ 50 ರನ್ ಒಟ್ಟುಗೂಡಿಸಿದರು. ಹೀಗಾಗಿ ತಂಡದ ಮೊತ್ತ ನೂರರ ಗಡಿ ದಾಟಿತು. ಮೆಹರೂಬ್ ಸರ್ವಾಧಿಕ 30 ರನ್ ಹೊಡೆದರು.