Advertisement

ಅಂಡರ್‌ 19 ವನಿತಾ ಟಿ20 ವಿಶ್ವಕಪ್‌ ;ಭಾರತ ವನಿತೆಯರಿಗೆ ಭರ್ಜರಿ ಗೆಲುವು: ಯುಎಇಗೆ ಸೋಲು

11:30 PM Jan 16, 2023 | Team Udayavani |

ಬೆನೋನಿ (ದಕ್ಷಿಣ ಆಫ್ರಿಕಾ): ನಾಯಕಿ ಶಫಾಲಿ ವರ್ಮ ಅವರ ಸ್ಫೋಟಕ ಆಟ ಮತ್ತು ಆರಂಭಿಕ ಆಟಗಾರ್ತಿ ಶ್ವೇತಾ ಸೆಹ್ರಾವತ್‌ ಅವರ ಅಮೋಘ ಆಟದಿಂದಾಗಿ ಭಾರತೀಯ ತಂಡವು ಅಂಡರ್‌ 19 ವನಿತಾ ಟಿ20 ವಿಶ್ವಕಪ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಯುಎಇ ತಂಡವನ್ನು 122 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ.

Advertisement

ಶಫಾಲಿ, ಶ್ವೇತಾ ಮತ್ತು ರಿಚಾ ಘೋಷ್‌ ಅವರ ಭರ್ಜರಿ ಆಟ ದಿಂದಾಗಿ ಭಾರತವು ಮೂರು ವಿಕೆಟಿಗೆ 219 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಭಾರತೀಯ ಬೌಲರ್‌ಗಳ ನಿಖರ ದಾಳಿಗೆ ರನ್‌ ಗಳಿಸಲು ಒದ್ದಾಡಿದ ಯುಎಇ ಆಟಗಾರ್ತಿಯರು 5 ವಿಕೆಟಿಗೆ ಕೇವಲ 97 ರನ್‌ ಗಳಿಸಲಷ್ಟೇ ಶಕ್ತರಾಗಿ ಶರಣಾದರು.

“ಡಿ’ ಬಣದಲ್ಲಿ ಆಡುತ್ತಿರುವ ಭಾರತಕ್ಕೆ ಇದು ಎರಡನೇ ಗೆಲುವು ಆಗಿದ್ದು ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತ್ತು.

ಶಫಾಲಿ, ಶ್ವೇತಾ ಅಮೋಘ ಆಟ
ಸೀನಿಯರ್‌ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಶಫಾಲಿ ಮತ್ತೆ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. ಬೌಂಡರಿಗಳ ಸುರಿಮಳೆಗೈದ ಅವರು ಮೊದಲ ವಿಕೆಟಿಗೆ ಶ್ವೇತಾ ಜತೆ ಕೇವಲ 8.3 ಓವರ್‌ಗಳಲ್ಲಿ 111 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಕೇವಲ 34 ಎಸೆತ ಎದುರಿಸಿದ ಅವರು 12 ಬೌಂಡರಿ ಮತ್ತು 4 ಸಿಕ್ಸರ್‌ ನೆರವಿನಿಂದ 78 ರನ್‌ ಗಳಿಸಿದರು.
ಶ್ವೇತಾ ಮತ್ತು ರಿಚಾ ಘೋಷ್‌ ಕೂಡ ಉತ್ತಮ ಆಟದ ಪ್ರದರ್ಶನ ನೀಡಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟುವಂತಾಯಿತು. ಅವರಿಬ್ಬರು ದ್ವಿತೀಯ ವಿಕೆಟಿಗೆ 89 ರನ್‌ ಪೇರಿಸಿದರು. 49 ಎಸೆತ ಎದುರಿಸಿದ ಅವರು ಶ್ವೇತಾ 10 ಬೌಂಡರಿ ನೆರವಿನಿಂದ 74 ರನ್‌ ಗಳಿಸಿ ಔಟಾಗದೆ ಉಳಿದರೆ ರಿಚಾ ಕೇವಲ 29 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ ನೆರವಿನಿಂದ 49 ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರು
ಭಾರತ 3 ವಿಕೆಟಿಗೆ 219 (ಶ್ವೇತಾ ಸೆಹ್ರಾವತ್‌ 74 ಔಟಾಗದೆ, ಶಫಾಲಿ 78, ರಿಚಾ ಘೋಷ್‌ 49); ಯುಎಇ 5 ವಿಕೆಟಿಗೆ 97 (ಲಾವಣ್ಯ ಕೆನಿ 24, ಮಹಿಕಾ ಗೌರ್‌ 26).

Advertisement

ಬಾಂಗ್ಲಾಕ್ಕೆ 2ನೇ ಜಯ
ಬೆನೋನಿ: ಅಂಡರ್‌ 19 ವಿಶ್ವಕಪ್‌ನ ಇನ್ನೊಂದು ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಶ್ರೀಲಂಕಾ ತಂಡವನ್ನು 10 ರನ್ನುಗಳಿಂದ ಸೋಲಿಸಿದೆ. “ಎ’ ಬಣದಲ್ಲಿ ಆಡುತ್ತಿರುವ ಬಾಂಗ್ಲಾ ತಂಡಕ್ಕೆ ಇದು ಎರಡನೇ ಗೆಲುವು ಆಗಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾವು ಬಲಿಷ್ಠ ತಂಡಗಳಲ್ಲಿ ಒಂದಾದ ಆಸ್ಟ್ರೇಲಿಯವನ್ನು ಬಗ್ಗುಬಡಿದಿತ್ತು.

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾ ತಂಡವು ಕೇವಲ 2 ವಿಕೆಟಿಗೆ 165 ರನ್‌ ಗಳಿಸಿತ್ತು. ಆರಂಭಿಕ ಆಟಗಾರ್ತಿ ಅಫಿಯಾ ಪ್ರೊಟಶಾ ಮತ್ತು ಶೋರ್ಣ ಅಕ್ತೆರ್‌ ಅರ್ಧಶತಕ ಹೊಡೆದಿದ್ದರು. ಇದಕ್ಕುತ್ತರವಾಗಿ ಶ್ರೀಲಂಕಾ ತಂಡವು 4 ವಿಕೆಟ್‌ ಕಳೆದುಕೊಂಡಿದ್ದು 155 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next