ದುಬೈ: ಅಂಡರ್ 19 ಏಷ್ಯಾ ಕಪ್ ಕೂಟದ ತನ್ನ ಮೂರನೇ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಗೆಲುವು ಸಾಧಿಸಿದೆ. ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಎದುರಾಳಿ ನೇಪಾಳವು ಸುಲಭದ ತುತ್ತಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ನೇಪಾಳವು 22.1 ಓವರ್ ಗಳಲ್ಲಿ ಕೇವಲ 52 ರನ್ ಗಳಿಗೆ ಆಲೌಟಾಗಿದೆ. ಭಾರತವು 7.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿದೆ.
ಭಾರತದ ಬಲಗೈ ವೇಗಿ ರಾಜ್ ಲಿಂಬಾನಿ ಅದ್ಭುತ ಬೌಲಿಂಗ್ ಗೆ ನೇಪಾಳ ತಂಡವು ಪತರುಗಟ್ಟಿತು. 9.1 ಓವರ್ ಎಸೆದ ಲಿಂಬಾನಿ ಕೇವಲ 13 ರನ್ ನೀಡಿ ಏಳು ವಿಕೆಟ್ ಪಡೆದರು. ನೇಪಾಳದ ಯಾವುದೇ ಆಟಗಾರ ಎರಡಂಕಿ ಮೊತ್ತ ಗಳಿಸಲು ವಿಫಲರಾದರು.
ಗುರಿ ಬೆನ್ನತ್ತಿದ ಭಾರತ ತಂಡದ ಆರಂಭಿಕ ಆಟಗಾರ ಅರ್ಶಿನ್ ಕುಲಕರ್ಣಿ 30 ಎಸೆತಗಳಲ್ಲಿ 43 ರನ್ ಗಳಿಸಿದರು. ಇದರಲ್ಲಿ ಐದು ಸಿಕ್ಸರ್ ಬಾರಿಸಿದ್ದರು.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದ ಭಾರತ ತಂಡವು ಮೂರನೇ ಪಂದ್ಯದಲ್ಲಿ ಅದ್ಭುತ ಜಯ ಗಳಿಸಿದೆ.