Advertisement

PVSನಲ್ಲಿ U-Turnಗೆ ಬ್ರೇಕ್‌ –ಗೊಂದಲ ; ವಾಹನ ಸವಾರರ ಪರದಾಟ

09:00 AM Apr 16, 2018 | Karthik A |

ಮಹಾನಗರ: ನಗರದ PVS ಸರ್ಕಲ್‌ ನಲ್ಲಿ ಯೂಟರ್ನ್ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಗೊಂದಲಕ್ಕೆ ಒಳಗಾಗಿ ಸಮಸ್ಯೆ ಎದುರಿಸಿದರು. ವಾಹನ ಅಪಘಾತ ತಪ್ಪಿಸುವ ನೆಲೆಯಲ್ಲಿ ಯೂಟರ್ನ್ ನಿಷೇಧ ಆಗಿದ್ದರೂ ವಾಹನ ಸವಾರರಿಗೆ ರವಿವಾರ ಸೂಕ್ತ ಮಾರ್ಗದರ್ಶನ ಸಿಗದೆ ಕೆಲವರು ಪರದಾಡಿದ ಪ್ರಸಂಗ ಎದುರಾಯಿತು. ಜೈಲು ರಸ್ತೆಯಿಂದ ಬರುವ ವಾಹನಗಳು ಎಂ.ಜಿ. ರಸ್ತೆಗೆ ಹೋಗಬೇಕಾದರೆ ಅವರು PVS ಸರ್ಕಲ್‌ನಲ್ಲಿ ಯೂಟರ್ನ್ ಪಡೆಯಬೇಕಿತ್ತು. ಅಲ್ಲಿಂದ ಲಾಲ್‌ಭಾಗ್‌ ಕಡೆಗೆ ಹೋಗಬಹುದಿತ್ತು. ಜತೆಗೆ ಎಂ.ಜಿ ರಸ್ತೆಯ ಮೂಲಕ PVSಗೆ ಆಗಮಿಸಿ ಮತ್ತೆ ಬೆಸೆಂಟ್‌ ಕಡೆಗೆ ಹೋಗಬೇಕಾದರೆ PVS ಸರ್ಕಲ್‌ನಲ್ಲಿ ಯೂಟರ್ನ್ ಪಡೆಯಬೇಕಿತ್ತು. ಆದರೆ ಇದಕ್ಕೆ ಈಗ ಬ್ರೇಕ್‌ ಹಾಕಲಾಗಿದೆ. ಸದ್ಯ PVS ಸರ್ಕಲ್‌ನಲ್ಲಿ ಯೂಟರ್ನ್ ನಿಷೇಧದ ಬೋರ್ಡ್‌ ಅಳವಡಿಸಲಾಗಿದೆ.

Advertisement

ರಸ್ತೆಯಲ್ಲಿಯೇ ಗಲಿಬಿಲಿ
ಎಂದಿನಂತೆ ವಾಹನ ಸವಾರರಿಗೆ ರವಿವಾರ ಹಾಕಿದ್ದ ಬೋರ್ಡ್‌ ಕಾಣಿಸಲಿಲ್ಲ. ಹೀಗಾಗಿ ಬಹುತೇಕ ವಾಹನ ಸವಾರರು ತಮ್ಮ ಕಾರು, ರಿಕ್ಷಾ, ದ್ವಿಚಕ್ರ ವಾಹನಗಳನ್ನು ಯೂಟರ್ನ್ ಪಡೆದುಕೊಂಡರು. ಆದರೆ, ಯೂಟರ್ನ್ ಆಗುತ್ತಿದ್ದಂತೆ ಎದುರಲ್ಲಿ ನಿಂತಿದ್ದ ಟ್ರಾಫಿಕ್‌ ಪೊಲೀಸರು ಆ ವಾಹನಗಳ ನಂಬರ್‌ ಅನ್ನು ನೋಟ್‌ ಮಾಡುತ್ತಿದ್ದರು. ಬೋರ್ಡ್‌ ಹಾಕಿರುವ ಬಗ್ಗೆ ಕೈ ಸನ್ನೆ ಮೂಲಕ ತಿಳಿಸಿದರು. ಈ ಮಧ್ಯೆ ಯೂಟರ್ನ್ ಬೋರ್ಡನ್ನು ನೋಡಿದ ವಾಹನ ಸವಾರರು ತತ್‌ಕ್ಷಣಕ್ಕೆ ಏನು ಮಾಡಬೇಕು ಎಂದು ತೋಚದೆ ಗಲಿಬಿಲಿಗೊಂಡರು.

ಈ ಮಧ್ಯೆ ಕೆನರಾ, ಬೆಸೆಂಟ್‌ ಕಾಲೇಜು ರಸ್ತೆ ಸಮೀಪ ವಾಹನ ದಟ್ಟಣೆ ಅಧಿಕಗೊಳ್ಳುವ ಕಾರಣದಿಂದ ಇಲ್ಲಿ ಕೆಲವು ವಾಹನದವರು ಯೂಟರ್ನ್ ಪಡೆದುಕೊಳ್ಳದೆ, PVSಗೆ ಬಂದು ಯೂಟರ್ನ್ ಪಡೆಯುತ್ತಿದ್ದರು. ಆದರೆ, ಈಗ ಬೆಸೆಂಟ್‌ ಕಾಲೇಜು ಸಮೀಪ ಸರ್ಕಲ್‌ನಲ್ಲಿ ವಾಹನದಟ್ಟಣೆ ಅಧಿಕಗೊಳ್ಳುವ ಸಾಧ್ಯತೆ ಇದೆ. 

ಈಗ ಸಂಚಾರ ಹೇಗೆ?
ಈಗ ಯೂಟರ್ನ್ ನಿಷೇಧವಿರುವ ಕಾರಣದಿಂದ ಜೈಲ್‌ ರೋಡ್‌ ಹಾಗೂ ಆ ಕಡೆಯಿಂದ ಬರುವವರು PVSನ ವಿ.ಆರ್‌.ಎಲ್‌. ಆಫೀಸ್‌ ಮುಂದುಗಡೆಯಲ್ಲಿ ಬಲಕ್ಕೆ ತಿರುಗಿ ವಾಪಾಸ್‌ ಬರಬೇಕಾಗಿದೆ. ಉಳಿದಂತೆ ಓಶಿಯನ್‌ಪರ್ಲ್ ಹೊಟೇಲ್‌ ಸಮೀಪ ಯೂಟರ್ನ್ ಹೊಡೆಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next