ಉಳ್ಳಾಲ: ಉಳ್ಳಾಲ ಕೈಕೋದಿಂದ ಸೀಗ್ರೌಂಡ್ ವರೆಗೆ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು 29 ಕೋಟಿ ರೂ. ಬಿಡುಗಡೆಯಾಗಿದ್ದು, ಮುಂದಿನ ಮಳೆಗಾಲದಲ್ಲಿ ಕಡಲ್ಕೊರೆತದಿಂದ ಹೆಚ್ಚು ಹಾನಿಯಾಗುವ ಪ್ರದೇಶಗಳಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ಅವರು ಉಳ್ಳಾಲದ ಕಡಲ್ಕೊರೆತ ಪ್ರದೇಶಗಳಾದ ಕಿಲೇರಿಯಾನಗರ, ಸೀಗ್ರೌಂಡ್, ಕೈಕೋ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಮಾತನಾಡಿದರು.
ಉಳ್ಳಾಲ ಕಡಲ್ಕೊರೆತಕ್ಕೆ ಸಂಬಂಧಿಸಿದಂತೆ ಮೊಗವೀರಪಟ್ಣ ವರೆಗೆ ಶಾಶ್ವತ ಪರಿಹಾರ ಕಾರ್ಯ ಈಗಾಗಲೇ ಮುಗಿದಿದ್ದು, ಕೈಕೋದಿಂದ ಸೀಗ್ರೌಂಡ್‌ವರೆಗೆ ಸಮುದ್ರ ತೀರ ವಿಭಿನ್ನವಾಗಿರುವುದರಿಂದ ತಡೆಗೋಡೆ ನಿರ್ಮಿಸಿ ಬಳಿಕ ಕಲ್ಲುಗಳನ್ನು ಹಾಕುವ ಕಾರ್ಯವನ್ನು ನಡೆಸಬೇಕಾಗಿದೆ. ಪರಿಣತರಿಂದ ಅಧ್ಯಯನ ನಡೆಸಿ ಬಳಿಕ ಕಾಮಗಾರಿ ನಡೆಯಲಿದೆ ಎಂದರು.
ಕೌನ್ಸಿಲರ್‌ಗಳಾದ ಮಹಮ್ಮದ್ ಮುಕ್ಕಚ್ಚೇರಿ, ಅಬ್ದುಲ್ ಬಶೀರ್, ರವಿಚಂದ್ರ ಗಟ್ಟಿ, ಜಬ್ಟಾರ್, ಕೆ.ಪಿ. ಅಬ್ದುಲ್ ಖಾದರ್, ತಾ.ಪಂ. ಸದಸ್ಯ ಜಬ್ಟಾರ್ ಬೋಳಿಯಾರ್, ಕಿನ್ಯ ಗ್ರಾ.ಪಂ. ಉಪಾಧ್ಯಕ್ಷ ಸಿರಾಜ್ ಕಿನ್ಯ, ರಾಮಾಚಾರಿ ಮೊಗವೀರಪಟ್ಣ, ಕಿಲೆರಿಯಾ ಮಸೀದಿ ಅಧ್ಯಕ್ಷ ಖಲೀಲ್, ಕೈಕೋ ಮಸೀದಿ ಅಧ್ಯಕ್ಷ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.