Advertisement

ಉ.ಕ. ಪ್ರತ್ಯೇಕ ಧ್ವಜಾರೋಹಣ, ರಾಜ್ಯೋತ್ಸವ!

02:11 AM Jan 02, 2019 | Team Udayavani |

ಬಾಗಲಕೋಟೆ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕಹಳೆ ಮೊಳಗಿಸಿರುವ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ, ಹೊಸ ವರ್ಷದ ಮೊದಲ ದಿನವೇ ಪ್ರತ್ಯೇಕ ರಾಜ್ಯ ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಆಚರಿಸಿದೆ. 

Advertisement

ಮುಧೋಳ ನಗರದಲ್ಲಿರುವ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಕಚೇರಿ ಆವರಣದಲ್ಲಿ ಮಂಗಳವಾರ ಬೆಳಗ್ಗೆ ರಾಜ್ಯ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ನೇತೃತ್ವದಲ್ಲಿ ಪ್ರತ್ಯೇಕ ರಾಜ್ಯೋತ್ಸವ ಆಚರಿಸಲಾಯಿತು. ಕೇಸರಿ, ಹಳದಿ ಮತ್ತು ಹಸಿರು ಬಣ್ಣ ಹೊಂದಿದ, ಮಧ್ಯದಲ್ಲಿ ಉತ್ತರದ 13 ಜಿಲ್ಲೆಗಳ ನಕ್ಷೆ ಇರುವ ಧ್ವಜವನ್ನು ಹಾರಿಸಲಾಯಿತು. ಈ ವೇಳೆ “ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಜಯವಾಗಲಿ’ ಎಂಬ ಘೋಷಣೆ ಕೂಗಲಾಯಿತು. ಜತೆಗೆ ಉ.ಕ.ದ ಅಭಿವೃದ್ಧಿಗೆ ನಿರ್ಲಕ್ಷ ವಹಿಸಿದ ಎಲ್ಲ ಸರ್ಕಾರಗಳ ವಿರುದ್ಧ
ಅಸಮಾಧಾನ ವ್ಯಕ್ತಪಡಿಸಲಾಯಿತು. ಮುಧೋಳ ನಗರದ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಕಚೇರಿ ಎದುರು ಹಾರಿಸಲಾಗಿದ್ದ ಪ್ರತ್ಯೇಕ ರಾಜ್ಯ ಧ್ವಜವನ್ನು ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಬೆಳಗ್ಗೆ 11ರ ಹೊತ್ತಿಗೆ ತೆರವುಗೊಳಿಸಿದರು. ಈ ವೇಳೆ ಹೋರಾಟ ಸಮಿತಿಯ ಯಾವ ಸದಸ್ಯರೂ ಇಲ್ಲದ್ದರಿಂದ ಯಾವುದೇ ಗಲಾಟೆ ಆಗಲಿಲ್ಲ. 

ನಿರ್ಣಯ ಕೈಗೊಂಡಿತ್ತು: ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಕಳೆದ ಸೆ.23ರಂದು ಬಾಗಲಕೋಟೆಯಲ್ಲಿ ಸಭೆ ನಡೆಸಿ
ಐದು ನಿರ್ಣಯ ಕೈಗೊಳ್ಳಲಾಗಿತ್ತು. ಉ.ಕ.ಪ್ರತ್ಯೇಕ ರಾಜ್ಯದ ರಾಜಧಾನಿ, ಉಕ ಕನ್ನಡ ರಾಜ್ಯೋತ್ಸವ ಆಚರಿಸುವ ದಿನ ನಿಗದಿ,
ಪ್ರತ್ಯೇಕ ರಾಜ್ಯದಲ್ಲಿ ಎಷ್ಟು ಮತ್ತು ಯಾವ ಯಾವ ಜಿಲ್ಲೆಗಳು ಒಳಗೊಂಡಿರಬೇಕು, ಪ್ರತ್ಯೇಕ ರಾಜ್ಯದ ನಕ್ಷೆ, ಪ್ರತ್ಯೇಕ ರಾಜ್ಯದ ಧ್ವಜ
ಹೇಗಿರಬೇಕೆಂಬ ನಿರ್ಣಯ ಕೈಗೊಂಡು ಜ.1ರಂದು ಪ್ರತ್ಯೇಕ ಕನ್ನಡ ರಾಜ್ಯೋತ್ಸವ ಆಚರಿಸಲು ನಿರ್ಣಯ ಕೈಗೊಳ್ಳಲಾಗಿತ್ತು.
ಸಮಿತಿಯ ನಿರ್ಣಯದಂತೆ ಪ್ರತ್ಯೇಕ ಧ್ವಜ ಹಾರಿಸುವ ಜತೆಗೆ ಉಕ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next