Advertisement

World Cup: ಅಂಡರ್‌-19 ವಿಶ್ವಕಪ್‌ ಅಮೆರಿಕ ವಿರುದ್ಧ ಭಾರತ “ಅಭ್ಯಾಸ”

11:50 PM Jan 27, 2024 | Team Udayavani |

ಬ್ಲೋಮ್‌ಫಾಂಟೀನ್‌: ಈಗಾಗಲೇ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅಜೇಯವಾಗಿ “ಸೂಪರ್‌ 6′ ಹಂತವನ್ನು ಪ್ರವೇಶಿಸಿರುವ ಭಾರತ, ರವಿವಾರದ ಕೊನೆಯ ಗ್ರೂಪ್‌ ಪಂದ್ಯದಲ್ಲಿ ಅಮೆರಿಕ ವಿರುದ್ಧ ಆಡಲಿದೆ. ಉದಯ್‌ ಸಹಾರಣ್‌ ಬಳಗಕ್ಕೆ ಇದೊಂದು ಅಭ್ಯಾಸ ಪಂದ್ಯವಾಗಲಿದೆ.

Advertisement

ಗ್ರೂಪ್‌ ಹಂತದ ಮೊದಲೆರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಐರ್ಲೆಂಡ್‌ ವಿರುದ್ಧ ಗೆದ್ದು ಬಂದ ಭಾರತಕ್ಕೆ ಭಾರತೀಯರನ್ನೇ ಒಳಗೊಂಡಿರುವ ಅಮೆರಿಕವನ್ನು ಸೋಲಿಸುವುದು ಕಠಿನವೆನಿಸದು. ಅಮೆರಿಕ ಎರಡೂ ಪಂದ್ಯಗಳಲ್ಲಿ ಸೋತು ಈಗಾಗಲೇ ತನ್ನ ದೌರ್ಬಲ್ಯವನ್ನು ಬಯಲುಗೊಳಿಸಿದೆ.

ಕಪ್ತಾನನ ಆಟ ಆಡಿರುವ ಉದಯ್‌ ಸಹಾರಣ್‌ ಎರಡೂ ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ. 3ನೇ ಕ್ರಮಾಂಕದ ಬ್ಯಾಟರ್‌ ಮುಶೀರ್‌ ಖಾನ್‌ ಐರ್ಲೆಂಡ್‌ ವಿರುದ್ಧ ಆಕರ್ಷಕ ಶತಕ ಬಾರಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದಾರೆ. ಅಣ್ಣ ಸಫ‌ìರಾಜ್‌ ಖಾನ್‌ ಅವರಂತೆ ಮುಶೀರ್‌ ಕೂಡ ದೊಡ್ಡ ಇನ್ನಿಂಗ್ಸ್‌ ಕಟ್ಟಬಲ್ಲ ಛಾತಿ ಹೊಂದಿರುವುದು ಇದರಿಂದ ಸಾಬೀತಾಗಿದೆ. ಸಚಿನ್‌ ದಾಸ್‌ ಫಿನಿಶರ್‌ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಆರಂಭಕಾರ ಅರ್ಶಿನ್‌ ಕುಲಕರ್ಣಿ ಬಿಗ್‌ ಸ್ಕೋರ್‌ ದಾಖಲಿಸಬೇಕಾದ ಅಗತ್ಯವಿದೆ. ಮೊದಲೆರಡು ಪಂದ್ಯಗಳಲ್ಲಿ ಇವರ ಗಳಿಕೆ 7 ಮತ್ತು 32 ರನ್‌. ಸೂಪರ್‌ 6 ಹಂತದ ಸ್ಪರ್ಧೆ ಬಿರುಸುಗೊಳ್ಳುವುದರಿಂದ ಎಲ್ಲರ ಫಾರ್ಮ್ ಕೂಡ ನಿರ್ಣಾಯಕವಾಗಲಿದೆ.

ಭಾರತ-ಯುಎಸ್‌ಎ ನಡುವಿನ ಪಂದ್ಯ ಅಪರಾಹ್ನ 1.30ಕ್ಕೆ ಆರಂಭವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next