ಕೌಲಾಲಂಪುರ: ಅಂಡರ್-19 ಏಶ್ಯ ಕಪ್ ಕ್ರಿಕೆಟ್ ಕೂಟದ ತನ್ನ ದ್ವಿತೀಯ ಪಂದ್ಯದಲ್ಲಿ ನೆಚ್ಚಿನ ಭಾರತ ತಂಡ ನೇಪಾಲದ ಕೈಯಲ್ಲಿ ಆಘಾತಕಾರಿ ಸೋಲುಂಡಿದೆ.
ರವಿವಾರದ ಈ ಮುಖಾಮುಖೀಯನ್ನು ನೇಪಾಲ 19 ರನ್ನುಗಳಿಂದ ಗೆದ್ದು ಬೀಗಿತು. ದಿನದ ಇನ್ನೊಂದು ಪಂದ್ಯದಲ್ಲಿ ಪಾಕಿಸ್ಥಾನ 226 ರನ್ನುಗಳ ಬೃಹತ್ ಅಂತರದಿಂದ ಯುಎಇಯನ್ನು ಮಣಿಸಿತು.
ಆತಿಥೇಯ ಮಲೇಶ್ಯವನ್ನು 202 ರನ್ನುಗಳ ಭಾರೀ ಅಂತರದಿಂದ ಮಣಿಸಿದ ಭಾರತ, ನೇಪಾಲಕ್ಕೆ ಸಾಟಿಯಾಗದೇ ಹೋದದೊಂದು ದುರಂತ. ಬ್ಯಾಟಿಂಗಿಗೆ ಇಳಿಸಲ್ಪಟ್ಟ ನೇಪಾಲ 8 ವಿಕೆಟಿಗೆ 185 ರನ್ ಗಳಿಸಿದರೆ, ಭಾರತ 48.1 ಓವರ್‌ಗಳಲ್ಲಿ 166 ರನ್ನಿಗೆ ಆಟ ಮುಗಿಸಿತು.
ನಾಯಕ ದೀಪೇಂದ್ರ ಸಿಂಗ್ ಅವರ ಆಲ್‌ರೌಂಡ್ ಪ್ರದರ್ಶನ ನೇಪಾಲದ ಜಯದಲ್ಲಿ ಮಹತ್ವದ ಪಾತ್ರ ವಹಿಸಿತು. ಬ್ಯಾಟಿಂಗ್ ವೇಳೆ 88 ರನ್ ಬಾರಿಸಿ ತಂಡದ ರಕ್ಷಣೆಗೆ ನಿಂತ ಅವರು, ಬೌಲಿಂಗ್ ಆಕ್ರಮಣದ ವೇಳೆ 39 ರನ್ನಿಗೆ 4 ವಿಕೆಟ್ ಕಿತ್ತು ಭಾರತಕ್ಕೆ ಕಡಿವಾಣ ತೊಡಿಸಿದರು. ಪವನ ಸರಾಫ್ ಮತ್ತು ಶಾಹಬ್ ಆಲಂ ತಲಾ 2 ವಿಕೆಟ್ ಉರುಳಿಸಿದರು.
ಭಾರತದ ಆರಂಭ ಉತ್ತಮವಾಗಿಯೇ ಇತ್ತು. ನಾಯಕ ಹಿಮಾಂಶು ರಾಣ (46) ಮತ್ತು ಮನ್‌ಜೋತ್ ಕಾಲಾÅ (35) ಮೊದಲ ವಿಕೆಟಿಗೆ 12.2 ಓವರ್‌ಗಳಿಂದ 65 ರನ್ ಪೇರಿಸಿ ಭದ್ರ ಬುನಾದಿ ಹಾಕಿದ್ದರು. ಆದರೆ ಇಲ್ಲಿಂದ ಮುಂದೆ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಹೋಯಿತು. ಮಧ್ಯಮ ಕ್ರಮಾಂಕದಲ್ಲಿ ಅಭಿಷೇಕ್ ಶರ್ಮ (27) ಮತ್ತು ಕೀಪರ್ ಅನುಜ್ ರಾವತ್ (18) ಒಂದಿಷ್ಟು ಹೋರಾಟ ನಡೆಸಿದ್ದನ್ನು ಬಿಟ್ಟರೆ ಕೆಳ ಕ್ರಮಾಂಕದ ಆಟಗಾರರೆಲ್ಲ ಅಗ್ಗಕ್ಕೆ ಔಟಾದರು.
ನೇಪಾಲ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 2 ವಿಕೆಟ್‌ಗಳಿಂದ ಸೋತಿತ್ತು. ಭಾರತದ ಮುಂದಿನ ಎದುರಾಳಿ ಬಾಂಗ್ಲಾದೇಶ. ಈ ಪಂದ್ಯ ಮಂಗಳವಾರ ನಡೆಯಲಿದೆ. ಸೆಮಿಫೈನಲ್ ಪ್ರವೇಶಿಸಬೇಕಾದರೆ ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.
ಸಂಕ್ಷಿಪ್ತ ಸ್ಕೋರ್: ನೇಪಾಲ-8 ವಿಕೆಟಿಗೆ 185 (ದೀಪೇಂದ್ರ 88, ಜೀತೇಂದ್ರ 36, ಆದಿತ್ಯ ಠಾಕ್ರೆ 33ಕ್ಕೆ 2, ಅಭಿಷೇಕ್ ಶರ್ಮ 38ಕ್ಕೆ 2). ಭಾರತ-48.1 ಓವರ್‌ಗಳಲ್ಲಿ 166 (ರಾಣ 46, ಕಾಲಾÅ 35, ಅಭಿಷೇಕ್ 27, ದೀಪೇಂದ್ರ 39ಕ್ಕೆ 4, ಆಲಂ 11ಕ್ಕೆ 2, ಸರಾಫ್ 24ಕ್ಕೆ 2).