ಕಾಸರಗೋಡು: ನಗರದ ಪಳ್ಳಂ ರೈಲ್ವೇ ಅಂಡರ್ ಪಾಸ್‌ನ ಮೇಲ್ಗಡೆಯ ರೈಲು ಹಳಿಯಲ್ಲಿ ಮಂಗಳವಾರ ಮುಂಜಾನೆ 5.30ಕ್ಕೆ ಯುವಕರಿಬ್ಬರ ಮೃತದೇಹ ಪತ್ತೆಯಾಗಿದೆ.
ಗೂಡ್ಸ್ ರೈಲುಗಾಡಿ ಢಿಕ್ಕಿ ಹೊಡೆದು ಸಾವಿಗೀಡಾಗಿರಬೇಕೆಂದು ಶಂಕಿಸಲಾಗಿದೆ. ಇವರಿಬ್ಬರು ರೈಲು ಹಳಿ ಬಳಿ ಇಯರ್ ಫೋನ್ ಬಳಸಿ ಮೊಬೈಲ್ ಫೋನ್ ವೀಕ್ಷಿಸುತ್ತಿದ್ದ ವೇಳೆ ಅವರಿಗೆ ರೈಲು ಢಿಕ್ಕಿ ಹೊಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ಮೂರು ಮೊಬೈಲ್ ಫೋನ್‌ಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಸುದ್ದಿ ತಿಳಿದ ಕಾಸರಗೋಡು ಮತ್ತು ರೈಲ್ವೇ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.
ಮೃತದೇಹಗಳನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಇದೇ ಸಂದರ್ಭದಲ್ಲಿ ಕೋಟೆ ರಸ್ತೆಯ ಕರಿಪ್ಪೋಡಿಯ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿರುವ ತಮಿಳುನಾಡು ವಲಸೆ ಕಾರ್ಮಿಕರಾದ ಗಣೇಶ್ ಮತ್ತು ಬಾಲಕೃಷ್ಣನ್ ಅವರ ಮೊಬೈಲ್ ಫೋನ್‌ಗಳನ್ನು ಸೋಮವಾರ ರಾತ್ರಿ ಆ ಕ್ವಾರ್ಟರ್ಸ್‌ನ ಕಿಟಕಿ ಬಳಿಯಿಂದ ಯಾರೋ ಕಳವುಗೈದಿದ್ದರು. ಈ ಬಗ್ಗೆ ಪೊಲೀಸರಿಗೆ ಮಂಗಳವಾರ ಬೆಳಗ್ಗೆ ದೂರು ನೀಡಿದ್ದರು. ಈ ಎರಡು ಮೊಬೈಲ್ ಫೋನ್‌ಗಳ ಸಹಿತ ಮೂರು ಮೊಬೈಲ್ ಫೋನ್‌ಗಳು ಮೃತ ದೇಹದ ಬಳಿಯಲ್ಲಿ ಪತ್ತೆಯಾಗಿವೆ. ಸಾವಿಗೀಡಾದ ಯುವಕರ ಫೋನ್‌ಗಳೂ ಪತ್ತೆಯಾಗಿದೆ.
ಸಾವಿಗೀಡಾದ ಯುವಕನೋರ್ವನ ಪೈಕಿ ಓರ್ವ ನೆಲ್ಲಿಕಟ್ಟೆ ಚೂರಿಪ್ಪಳ್ಳ ಸಾಲೆತ್ತಡ್ಕದ ಮೊಹಮ್ಮದ್ ಶಹೀರ್(19) ಎಂದು ಗುರುತಿಸಲಾಗಿದೆ. ಲಭ್ಯ ಫೋನ್‌ನಲ್ಲಿ ಕೊನೆಯ ಕರೆಯ ನಂಬ್ರದಲ್ಲಿ ಪೊಲೀಸರು ಸಂಪರ್ಕಿಸಿದಾಗ ಯುವತಿಯೋರ್ವಳು ಕರೆ ಸ್ವೀಕರಿಸಿದ್ದು, ತನ್ನನ್ನು ಕರೆದ ವ್ಯಕ್ತಿ ನಿಹಾಲ್ ಎಂದು ತಿಳಿಸಿದ್ದಾಳೆ. ಅದರಂತೆ ಪೊಲೀಸರು ನಡೆಸಿದ ತನಿಖೆಯಲ್ಲಿ ಮೃತರನ್ನು ಗುರುತಿಸಲು ಸಾಧ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ತಾಯಿ ಜನರಲ್ ಆಸ್ಪತ್ರೆಗೆ ಬಂದು ಮೃತನು ತನ್ನ ಪುತ್ರನಾಗಿರುವುದಾಗಿ ಗುರುತು ಹಚ್ಚಿದ್ದಾರೆ.