Advertisement

ಕಡಲ ಸವಾಲು ಸ್ವೀಕರಿಸಲು ಕಾಂಚಾಣ ತೊಡಕು

11:08 AM Oct 05, 2018 | |

ಪುತ್ತೂರು: ವಿಶ್ವ ಜೀವ ರಕ್ಷಕ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾದ ಪುತ್ತೂರಿನ ಇಬ್ಬರು ಯುವ ಈಜುಗಾರರಿಗೆ ಇದೀಗ ಹಣದ ಆವಶ್ಯಕತೆ ಎದುರಾಗಿದೆ. ಪುತ್ತೂರಿನ ಪರ್ಲಡ್ಕ ಬಾಲವನದಲ್ಲಿ ತರಬೇತಿ ಪಡೆದು, ಹಲವು ಪ್ರಶಸ್ತಿಗಳನ್ನು ಪಡೆದ ತ್ರಿಶೂಲ್‌ ಗೌಡ ಹಾಗೂ ಸ್ವೀಕೃತ್‌ ಆನಂದ್‌ ಅವರೀಗ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ. ವಿಶ್ವ ಜೀವ ರಕ್ಷಕ ಚಾಂಪಿಯನ್‌ಶಿಪ್‌ಗಾಗಿ ಇತ್ತೀಚೆಗೆ ಪುಣೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದು, ಆಸ್ಟ್ರೇಲಿಯಾದ ವಿಶ್ವ ಸ್ಪರ್ಧೆಗೆ ಹೊರಟು ನಿಂತಿದ್ದಾರೆ.

Advertisement

2018ರ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದ ಅಡಿಲೇಡ್‌ನ‌ಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ನಡೆಯಲಿದೆ. ಇಲ್ಲಿನ ಪ್ರಯಾಣಕ್ಕಾಗಿಯೇ ಒಬ್ಬನಿಗೆ ಸುಮಾರು 1.5 ಲಕ್ಷ ರೂ. ಖರ್ಚು ಇದೆ. ಇತರ ಖರ್ಚುಗಳು ಬೇರೆಯೇ ಇವೆ. ಇಷ್ಟು ಹಣವನ್ನು ಹೊಂದಿಸುವ ನಿಟ್ಟಿನಲ್ಲಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. 

ಚಾಂಪಿಯನ್‌ಶಿಪ್‌ಗೆ ತೆರಳುತ್ತಿರುವ ಇನ್ನೋರ್ವ ಕೋಚ್‌ ರೋಹಿತ್‌ ಪಿ.. ಕೋಚ್‌ಗಳಾದ ಪಾರ್ಥ ವಾರಣಾಸಿ ಹಾಗೂ ಭಾರತೀಯ ಲೈಫ್‌ ಸೇವಿಂಗ್‌ ಸೊಸೈಟಿಯ ನಿರ್ದೇಶಕ ನಿರೂಪ್‌ ಪಿ. ಭಂಡಾರಿ ಜತೆಗೂಡಿ ಮಂಗಳೂರಿನಲ್ಲಿ ಹಲವು ಉಚಿತ ತರಬೇತಿಗಳನ್ನು ಮೂರು ವರ್ಷಗಳಿಂದ ನಡೆಸುತ್ತಿದ್ದಾರೆ. ಮೀನುಗಾರರ ಮಕ್ಕಳು, ಸ್ಥಳೀಯರು, ಶಾಲಾ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಇದರ ಜತೆಗೆ ಪುತ್ತೂರಿನ ಬಾಲವನದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರತಿಭೆಗಳನ್ನು ಹುಟ್ಟುಹಾಕಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಈ ಪ್ರತಿಭೆಗಳಿಗೆ ಈಗ ಹಣದ ಆವಶ್ಯಕತೆ ಎದುರಾಗಿದೆ.

ಏನಿದು ಚಾಂಪಿಯನ್‌ಶಿಪ್‌?
ಜನರ ಸಾವಿನ ಕಾರಣಗಳನ್ನು ಲೆಕ್ಕ ಹಾಕುತ್ತಾ ಸಾಗಿದರೆ, ಅತಿಹೆಚ್ಚು ಮಂದಿ ಮೃತಪಡುತ್ತಿರುವುದು ನೀರಿನಲ್ಲಿ ಮುಳುಗಿ. ಆಕಸ್ಮಿಕವಾಗಿ ನೀರಿಗೆ ಬಿದ್ದಾಗ ಪಾರಾಗುವುದು ಹೇಗೆಂದು ತಿಳಿದಿರುವುದಿಲ್ಲ. ಇನ್ನೊಬ್ಬರನ್ನು ರಕ್ಷಿಸುವುದು ಹೇಗೆ ಎನ್ನುವುದೂ ಗೊತ್ತಿಲ್ಲ. ಇದನ್ನು ತಡೆಯುವ ನಿಟ್ಟಿನಲ್ಲಿ ಪ್ರತಿವರ್ಷ ವಿಶ್ವ ಮಟ್ಟದಲ್ಲಿ ಈ ಚಾಂಪಿಯನ್‌ಶಿಪನ್ನು ಆಯೋಜಿಸಲಾಗುತ್ತದೆ. ಈ ಸ್ಪರ್ಧೆಗೆ ಪುತ್ತೂರಿನ ಇಬ್ಬರು ಯುವ ಈಜುಗಾರರು ಆಯ್ಕೆ ಆಗಿದ್ದಾರೆ ಎನ್ನುವುದೇ ಹೆಮ್ಮೆಯ ವಿಷಯ.

ಯುವ ಈಜುಗಾರರು
17ರ ಹರೆಯದ ತ್ರಿಶೂಲ್‌ ಸಂತ ಫಿಲೋಮಿನ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ. ಇವರ ತಂದೆ ಪುತ್ತೂರು ಬಾಲವನದ ಈಜುಕೊಳದ ವಾಚ್‌ಮನ್‌. ಹೀಗಿದ್ದರೂ, 16ರ ವಯೋಮಾನದ ರೆಸ್ಕ್ಯೂ ಇಂಡಿಯಾ 2017 ಚಾಂಪಿಯನ್‌ಶಿಪ್‌ನಲ್ಲಿ 10 ಪದಕಗಳನ್ನು ಸಂಪಾದಿಸಿದ್ದಾರೆ. 26ರ ಹರೆಯದ ಸ್ವೀಕೃತ್‌ ಡಿಜಿಟಲ್‌ ಪ್ರಿಂಟಿಂಗ್‌ ನಡೆಸುತ್ತಿದ್ದಾರೆ. ಇದೀಗ ಈ ಇಬ್ಬರು ಆಟಗಾರರು, ವಿಶ್ವ ದರ್ಜೆಯ ಸ್ಪರ್ಧೆಗೆ ಅಣಿಯಾಗಿದ್ದಾರೆ. ಅಷ್ಟು ವೆಚ್ಚವನ್ನು ಭರಿಸಲು ಸಾಧ್ಯವಾಗದೆ, ಅಸಹಾಯಕರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next