Advertisement

ಅಜೆಕಾರು: ಪಾಳುಬಿದ್ದ ಪ. ಪಂಗಡದ‌ ಕಲ್ಯಾಣ ಇಲಾಖೆಯ ಸಿಬಂದಿ ವಸತಿಗೃಹ

12:52 AM Nov 09, 2019 | Sriram |

ಅಜೆಕಾರು: ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ವಿದ್ಯಾರ್ಥಿ
ನಿಲಯದ ಸಿಬಂದಿಗಳ ವಸತಿಗೃಹ ನಿರ್ಮಾಣಗೊಂಡು 4 ವರ್ಷ ಕಳೆದಿ ದ್ದರೂ ಉಪಯೋಗಕ್ಕಿಲ್ಲದಂತಾಗಿದೆ. ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಎರಡು ವಸತಿ ಗೃಹವನ್ನು ನಿರ್ಮಿತಿ ಕೇಂದ್ರವು ನಿರ್ಮಿಸಿದ್ದು ಕಟ್ಟಡ ಪೂರ್ಣಗೊಂಡ ಬಳಿಕ ಬಿಲ್‌ ಪಾವತಿಗೆ ಉಡುಪಿ ನಿರ್ಮಿತಿ ಕೇಂದ್ರವು ಕಾರ್ಕಳ ತಾ| ಸಮಾಜ ಕಲ್ಯಾಣಾಧಿಕಾರಿ ಕಚೇರಿಗೆ ಜೂ. 1 2015ರಲ್ಲಿ ಪತ್ರ ಬರೆದಿದೆ. ಆದರೆ ಈ ಬಗ್ಗೆ ಕಾರ್ಕಳ ಸಮಾಜ ಕಲ್ಯಾಣಾಧಿಕಾರಿಯವರಿಗೆ ಹೆಚ್ಚಿನ ಮಾಹಿತಿ ಇಲ್ಲವೆಂದು ತಿಳಿಸಿದ್ದಾರೆ.

Advertisement

ನಿರ್ವಹಣೆ ಇಲ್ಲದೆ ನಿರುಪಯುಕ್ತ
ಆದರೆ ಕಟ್ಟಡ ಸದೃಢವಾಗಿ ನಿರ್ಮಾಣ ವಾಗಿದ್ದರೂ ಸಹ ಸಂಬಂಧ ಪಟ್ಟ ಇಲಾಖೆಗಳ ಸೂಕ್ತ ನಿರ್ವಹಣೆ ಇಲ್ಲದೆ ಕಟ್ಟಡ ಉದ್ಘಾಟನೆಗೊಳ್ಳದೆ ನಿರುಪಯುಕ್ತವಾಗಿದೆ. ಕಟ್ಟಡದ ಬಾಗಿಲು ರಾತ್ರಿ ಹಗಲೆನ್ನದೆ ತೆರೆದಿದ್ದು ಸಮಾಜಬಾಹಿರ ಚಟುವಟಿಕೆಗಳು ಈ ಕಟ್ಟಡದಲ್ಲಿ ನಡೆಯುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ. ಕಟ್ಟಡದ ಕಿಟಕಿಯ ಗಾಜುಗಳು ಸಂಪೂರ್ಣವಾಗಿ ಹಾನಿಗೊಂಡಿವೆ. ನಾಯಿಗಳು ಸೇರಿದಂತೆ ಪ್ರಾಣಿಗಳು ವಾಸ ಮಾಡುತ್ತಿದ್ದು ಕಟ್ಟಡದ ಒಳಗೆ ರಕ್ತದ ಕಲೆಗಳು ಹೆಪ್ಪುಗಟ್ಟಿ ನಿಂತಿವೆ. ಕಟ್ಟಡದ ಸುತ್ತಲೂ ಗಿಡಗಂಟಿ ತುಂಬಿಹೋಗಿದೆ.

ಈ ಕಟ್ಟಡದ ಒಂದು ಕೋಣೆಯಲ್ಲಿ ವಿದ್ಯಾರ್ಥಿ ನಿಲಯದ ಪೀಠೊಪಕರಣ ದಾಸ್ತಾನು ಇಡಲಾಗಿದ್ದು ಇದಕ್ಕೆ ಯಾವುದೇ ಭದ್ರತೆ ಇಲ್ಲವಾಗಿದೆ. ಯಾವುದೇ ಸಂದರ್ಭದಲ್ಲಿ ಪೀಠೊಪಕರಣಗಳನ್ನು ಕಳ್ಳರು ಕದ್ದೊಯ್ಯುವ ಸಾಧ್ಯತೆ ಇದೆ. ಹಾಸ್ಟೆಲ್‌ ಸುತ್ತ ಗಿಡಗಂಟಿ ತುಂಬಿ ಹೋಗಿರುವುದರಿಂದ ಕಾಡುಪ್ರಾಣಿ,ವಿಷ ಜಂತುಗಳು ಇದರಲ್ಲಿ ಅವಿತು ವಿದ್ಯಾರ್ಥಿಗಳ ಮೇಲೆರಗುವ ಸಂಭವವಿದೆ.

ಪೂರ್ಣಕಾಲಿಕ ವಾರ್ಡನ್‌ ಇಲ್ಲ
ವಿದ್ಯಾರ್ಥಿ ವಸತಿಗೃಹದಲ್ಲಿ ಪ್ರಾಥಮಿಕ ,ಪ್ರೌಢಶಾಲೆಗೆ ಹೋಗುವ ಸುಮಾರು 60 ವಿದ್ಯಾರ್ಥಿಗಳಿದ್ದರೂ ಕಳೆದ ಕೆಲ ವರ್ಷಗಳಿಂದ ಪೂರ್ಣಕಾಲಿಕ ವಾರ್ಡನ್‌ ಇಲ್ಲವಾಗಿದೆ. ಹೆಬ್ರಿ ಆಶ್ರಮ ಶಾಲೆಯ ವಾರ್ಡನ್‌ನವರೇ ಪ್ರಭಾರವಾಗಿ ಕಳೆದ ಒಂದೂವರೆ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಇಲ್ಲಿಗೆ ವಾರಕ್ಕೆ ಒಮ್ಮೆಯಂತೆ ಭೇಟಿ ನೀಡುತ್ತಾರೆ. ಇವರಿಗೆ ಈ ವಿದ್ಯಾರ್ಥಿ ನಿಲಯ ಸೇರಿದಂತೆ ಇತರ ನಾಲ್ಕು ವಿದ್ಯಾರ್ಥಿ ನಿಲಯಗಳ ಜವಾಬ್ದಾರಿಯೂ ಇದೆ.

ವಸತಿಗೃಹ ಪರಿಶೀಲನೆ
ಅಜೆಕಾರು ಹಾಸ್ಟೆಲಿನ ಸಿಬಂದಿ ವಸತಿಗೃಹ ನಿರುಪಯುಕ್ತವಾಗಿರುವ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಅಧಿಕಾರಿಯವರಿಗೆ ಸೂಚಿಸಲಾಗುವುದು.
-ಉದಯ್‌ ಕೋಟ್ಯಾನ್‌,ಜಿ.ಪಂ .ಸದಸ್ಯರು

Advertisement

ಸೂಕ್ತ ರೀತಿ ನಿರ್ವಹಣೆ ಮಾಡಿ
ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ ಆಗಾಗ್ಗೆ ಭೇಟಿ ನೀಡಿ ವ್ಯವಸ್ಥೆ ಮಾಡಲಾಗುತ್ತಿದೆ. ಸರಕಾರದ ಅನುದಾನದಿಂದ ನಿರ್ಮಾಣಗೊಂಡ ಕಟ್ಟಡದಲ್ಲಿ ಯಾವುದೇ ಸಮಾಜಬಾಹಿರ ಚಟುವಟಿಕೆ ನಡೆಯದಂತೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯವಾಗಿದೆ.
-ದಿನೇಶ್‌ ಕುಮಾರ್‌,
ಅಧ್ಯಕ್ಷರು,ಗ್ರಾ.ಪಂ.ಮರ್ಣೆ

ಗಿಡಗಂಟಿಗಳ ಶೀಘ್ರ ತೆರವು ಹಾಸ್ಟೆಲ್‌ ಆವರಣದಲ್ಲಿ ತುಂಬಿರುವ ಗಿಡಗಂಟಿಗಳನ್ನು ಒಂದು ವಾರದೊಳಗೆ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ರಾಜಶ್ರೀ, ಪ್ರಭಾರ ವಾರ್ಡನ್‌

-ಜಗದೀಶ ಅಜೆಕಾರು

Advertisement

Udayavani is now on Telegram. Click here to join our channel and stay updated with the latest news.

Next