ನವದೆಹಲಿ : ಯಾವ ಕ್ಷಣದಲ್ಲಿ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಒಂದೇ ಒಂದು ಕ್ಷಣ ನಾವೇನಾದ್ರು ಮೈ ಮರೆತರೆ ಜೀವವೇ ಹೋಗುವ ಸಾಧ್ಯತೆಗಳು ಇವೆ. ಆದ್ರೆ ಒಂದೊಂದು ಬಾರಿ ಇನ್ನೇನು ಜೀವವೇ ಹೋಯ್ತು, ದೊಡ್ಡ ಆಘಾತವೇ ನಡೆಯಿತು ಎಂಬಷ್ಟರಲ್ಲಿ ದೇವರಂತೆ ಯಾರಾದ್ರು ಬಂದು ಕಾಪಾಡುತ್ತಾರೆ. ಇಂತಹ ಘಟನೆಗಳು ದಿನಕ್ಕೆ ಒಂದಾದ್ರು ನಡೆದೇ ನಡೆಯುತ್ತವೆ. ಇತ್ತೀಚೆಗೆ ವಿಯಟ್ನಾಂನಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ. 12 ನೇ ಮಹಡಿಯಿಂದ ಕೆಳಕ್ಕೆ ಬೀಳುತ್ತಿದ್ದ ಮಗುವನ್ನುಕಾಪಾಡಿರುವ ಡ್ರೈವರ್ ವಿಡಿಯೋ ಟ್ವಿಟ್ಟರ್ ನಲ್ಲಿ ಸದ್ದು ಮಾಡುತ್ತಿದೆ.
ವಿಯಟ್ನಾಂನಲ್ಲಿ ನ್ಗುಯೆನ್ ನ್ಗೋಕ್ ಮಾನ್ಹ್ ಎಂಬ ಡ್ರೈವರ್ ಪ್ಯಾಕೇಜ್ ನೀಡಲು ಹೋದ ವೇಳೆ, ಪಕ್ಕದ ಮಹಡಿಯಲ್ಲಿ ಜೋರಾಗಿ ಕಿರುಚುವ ಶಬ್ದ ಕೇಳಿ ಬಂದಿದೆ. ತಕ್ಷಣ ಆ ಕಡೆ ಗಮನಿಸಿದ ನ್ಗುಯೆನ್ ನ್ಗೋಕ್ ಮಾನ್ಹ್ ಅಲ್ಲಿಗೆ ಓಡಿ ಹೋಗಿದ್ದಾರೆ. ಅಲ್ಲಿ 12ನೇ ಮಹಡಿಯಲ್ಲಿ ಎರಡು ವರ್ಷದ ಚಿಕ್ಕ ಮಗು ನೇತಾಡುತ್ತಿರುವುದನ್ನು ನೋಡಿದ್ದಾರೆ. ನಂತ್ರ ಒಂದೇ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಸರ ಸರನೆ ಆ ಮಹಡಿಯನ್ನು ಏರಿ ಮಗುವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.
ಆ ಮಗು ಇನ್ನೇನು ಕೆಳಗಡೆ ಬಿದ್ದೇ ಬಿಡ್ತು ಎಂಬಷ್ಟರಲ್ಲಿ, ಮಹಡಿಗೆ ಓಡಿ ಹೋಗಿದ್ದ ಆಪತ್ಬಾಂಧವ ಡ್ರೈವರ್ ಆ ಮಗುವನ್ನು ತನ್ನ ಮಡಿಲಿಗೆ ಹಾಕಿಕೊಂಡು ಹೀರೋ ಎನ್ನಿಸಿಕೊಂಡಿದ್ದಾರೆ.
ಸಿನಿಮೀಯ ಮಾದರಿಯಲ್ಲಿ ನಡೆದ ಈ ಘಟನೆಯನ್ನು ಪಕ್ಕದ ಮಹಡಿಯಲ್ಲಿದ್ದ ಯಾರೋ ವಿಡಿಯೋ ಮಾಡಿಕೊಂಡಿದ್ದು, ಇದೀಗ ವಿಯಟ್ನಾಂನಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಅಲ್ಲದೆ ನ್ಗುಯೆನ್ ನ್ಗೋಕ್ ಮಾನ್ಹ್ ಬಗ್ಗೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.