ಕೋಟಾ/ಸೂರಿ(ಪಶ್ಚಿಮಬಂಗಾಳ): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ)ಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲು ಬಂದಿದ್ದಾರೆ ಎಂದು ತಪ್ಪಾಗಿ ಭಾವಿಸಿ ಸಾರ್ವಜನಿಕರು ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಘಟನೆ ರಾಜಸ್ಥಾನ್ ಮತ್ತು ಪಶ್ಚಿಮಬಂಗಾಳದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ರಾಜಸ್ಥಾನದ ಕೋಟಾ ನಗರದಲ್ಲಿ ರಾಷ್ಟ್ರೀಯ ವಿತ್ತ ಗಣತಿ ಇಲಾಖೆಯಿಂದ ಆಗಮಿಸಿದ್ದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಈಕೆ 2019-20ರ ರಾಷ್ಟ್ರೀಯ ವಿತ್ತ ಗಣತಿಯ ಅಂಕಿ ಅಂಶ ಸಂಗ್ರಹಿಸಲು ಆಗಮಿಸಿದ್ದರು. ಆದರೆ ಎನ್ ಆರ್ ಸಿ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಪ್ಪು ತಿಳಿದು ಹಲ್ಲೆ ನಡೆಸಿದ್ದರು. ಕೊನೆಗೆ ನನ್ನ ಹೆಸರು ನಾಝೀರಾನ್ ಬಾನು ನಾನು ಕೂಡಾ ಮುಸ್ಲಿಮ್ ಎಂದು ನೆರೆದ ಜನರಿಗೆ ಮನವರಿಕೆ ಮಾಡಿದ ನಂತರ ವಾಪಸ್ ತೆರಳಲು ಬಿಟ್ಟಿದ್ದರು.
ಮಹಿಳೆಯ ಮೊಬೈಲ್ ಫೋನ್ ಕಸಿದುಕೊಂಡು ವಿತ್ತ ಗಣತಿಗೆ ಸಂಬಂಧಿಸಿದಂತೆ ಸಂಗ್ರಹಿಸಿದ್ದ ಎಲ್ಲಾ ಡಾಟಾವನ್ನು ಆಕ್ರೋಶಿತ ಗುಂಪು ಡಿಲೀಟ್ ಮಾಡಿತ್ತು. ನಂತರ ಮುಸ್ಲಿಮ್ ಹೌದು ಎಂದು ಸಾಬೀತುಪಡಿಸಲು ಕುರಾನ್ ಪಠಿಸಲು ಒತ್ತಾಯಿಸಿದ್ದರು. ನಂತರ ಬಾನು ಕುರಾನ್ ಪಠಿಸಿ, ತನ್ನ ಗುರುತು ಪತ್ರವನ್ನು ತೋರಿಸಿರುವುದಾಗಿ ವರದಿ ವಿವರಿಸಿದೆ. ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಮತ್ತೊಂದು ಪ್ರಕರಣದಲ್ಲಿ ಪಶ್ಚಿಮಬಂಗಾಳದ ಬಿರ್ಮೂಮ್ ನಲ್ಲಿಯೂ 20 ವರ್ಷದ ಚುಮ್ಕಿ ಖಾಟುನ್ ಗೂಗಲ್ ಇಂಡಿಯಾ ಮತ್ತು ಟಾಟಾ ಟ್ರಸ್ಟ್ ನ ಉದ್ಯೋಗಿಯಾಗಿದ್ದು, ಆಕೆ ಗ್ರಾಮೀಣ ಮಹಿಳೆಯರಲ್ಲಿ ಡಿಜಿಟಲ್ ಸಾಕ್ಷರತೆ ಎಷ್ಟಿದೆ ಎಂಬ ಕುರಿತು ಸಮೀಕ್ಷೆ ನಡೆಸುತ್ತಿದ್ದಳು.
ಆದರೆ ಈಕೆ ಎನ್ ಆರ್ ಸಿಗೆ ಸಂಬಂಧಿಸಿದ ಅಂಕಿಅಂಶ ಸಂಗ್ರಹಿಸುತ್ತಿದ್ದಳು ಎಂದು ಆರೋಪಿಸಿ ಸ್ಥಳೀಯರು ಆಕೆ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ ಈಕೆಯ ಮನೆಯನ್ನು ಬೆಂಕಿ ಹಚ್ಚಿ ಸುಟ್ಟಿರುವುದಾಗಿ ವರದಿ ತಿಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ವರದಿ ವಿವರಿಸಿದೆ.