ವಿಜಯಪುರ: ಜಿಲ್ಲೆಯ ಆಲಮಟ್ಟಿಗೆ ಭೇಟಿ ನೀಡಿ ಗುರುವಾರ ಬೆಳಿಗ್ಗೆ ಹೊಸಪೇಟೆ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಕೇಂದ್ರ ಜಲ ಆಯೋಗದ ಇಬ್ಬರು ಅಧಿಕಾರಿಗಳು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಕೇಂದ್ರೀಯ ಜಲ ಆಯೋಗದ ನಿರ್ದೇಶಕ ಜಿತೇಂದ್ರ ಪನ್ವಾರ್ ಹಾಗೂ ಉಪ ನಿರ್ದೇಶಕ ಎಲ್.ಕೆ.ಆರ್.ಸ್ವಾಮಿ ಎಂದು ಗುರುತಿಸಲಾಗಿದೆ.
ಬುಧವಾರ ಭೀಮರಾಯನಗುಡಿ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಈ ಇಬ್ಬರು ಅಧಿಕಾರಿಗಳು, ರಾತ್ರಿ ಆಲಮಟ್ಟಿಗೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಿದ್ದರು.
ಇದನ್ನೂ ಓದಿ:ಸಹೋದರಿಯೊಂದಿಗೆ ಮಾತನಾಡಲು ಬಿಡಿ: ಸಿ.ಡಿ ಯುವತಿಯ ತಮ್ಮನ ಅಳಲು
ಗುರುವಾರ 7 ಗಂಟೆಗೆ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದು, ಸ್ಥಾನಿಕ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿದ್ದರು. ಜಲಾಶಯ ಪರಿಶೀಲನೆ ಬಳಿಕ ಉಪಹಾರ ಸೇವಿಸಿ ಬೆಳಗ್ಗೆ 9 ಗಂಟೆಗೆ ಆಲಮಟ್ಟಿಯಿಂದ ಬೆಂಗಳೂರಿಗೆ ಹೊರಟಿದ್ದರು. ಮಾರ್ಗ ಮಧ್ಯೆ ಹೊಸಪೇಟೆ ದಾಟಿದ ಬಳಿಕ ಮರಿಯಮ್ಮನಹಳ್ಳಿ ಬಳಿ ಪಕ್ಕದ ಲೇನ್ ನಿಂದ ಬಂದ ಇನ್ನೋವಾ ಕಾರು ಢಿಕ್ಕಿ ಹೊಡೆದ ಕಾರಣ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಗಾಯಗೊಂಡಿರುವ ಕೆಬಿಜೆಎನ್ಎಲ್ ಬೆಂಗಳೂರು ಕಛೇರಿ ಚಾಲಕ ಅನ್ವರ್ ಹುಸೇನ್ ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಇದನ್ನೂ ಓದಿ: ದೈವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಅಪಚಾರ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಎದುರಿನಿಂದ ಢಿಕ್ಕಿ ಹೊಡೆದಿರುವ ವಾಹನದಲ್ಲಿ ಇದ್ದವರಲ್ಲಿ ಇಬ್ಬರು ಮೃತಪಟ್ಟಿದ್ದು, ತೀವ್ರ ಗಾಯಗೊಂಡಿರುವ ಐವರನ್ನು ಬಳ್ಳಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.