ಪಣಜಿ : ಅರಬ್ಬೀ ಸಮುದ್ರದ ಗೋವೆಯ ಸಮೀಪದ ಬೀಚ್‌ಗಳಲ್ಲಿ ನಡೆದಿರುವ ಎರಡು ಪ್ರತ್ಯೇಕ ಅವಘಡಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಇಬ್ಬರು ತಮಿಳು ನಾಡಿನ ಪ್ರವಾಸಿಗರು ಮೃತಪಟ್ಟ ಘಟನೆ ವರದಿಯಾಗಿದೆ.
ತಮಿಳು ನಾಡು ಮತ್ತು ಕರ್ನಾಟಕದ ಎಂಟು ಮಂದಿಯ ಪ್ರವಾಸಿಗರ ಒಂದು ಸಮೂಹ ಉತ್ತರ ಗೋವೆಯ ಬಾಗಾ ಬೀಚಿಗೆ ಶನಿವಾರ ಸಂಜೆ ಭೇಟಿಕೊಟ್ಟಿತ್ತು.
ಈ ಗುಂಪಿನ ಮೂವರು ಸಮುದ್ರ ತೀರದಿಂದ ಸ್ವಲ್ಪ ದೂರದಲ್ಲಿರುವ ಬಂಡೆಗಳ ಮೇಲೆ ನಿಂತುಕೊಂಡು ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ತೆಗೆಯುವಾಗ ಭಾರೀ ದೊಡ್ಡ ಅಲೆಗಳು ಅಪ್ಪಳಿಸಿದವು. ಆಗ ಮೂವರ ಪೈಕಿ ಇಬ್ಬರು ಈಜಿಕೊಂಡು ದಡ ಸೇರಿದರು; ಆದರೆ ಮೂರನೇ ವ್ಯಕ್ತಿ, ತಮಿಳು ನಾಡಿನ ವೆಲ್ಲೂರ್ ನಿವಾಸಿ ದಿನೇಶ್ ಕುಮಾರ್ ರಂಗನಾಥನ್ (28) ನೀರು ಪಾಲಾಗಿ ಮೃತಪಟ್ಟರು. ಅವರ ಮೃತ ದೇಹವನ್ನು ಅನಂತರ ಮೇಲೆತ್ತಲಾಯಿತು.
ಇದೇ ರೀತಿಯ ಇನ್ನೊಂದು ಅವಘಡ ಉತ್ತರ ಗೋವೆಯ ಫೋರ್ಟ್ ಅಗುವಾಡಾ ಸಮೀಪದ ಬೀಚ್‌ನಲ್ಲಿ ನಡೆದು ತಮಿಳು ನಾಡಿನ 33ರ ಹರೆಯದ ಶಶಿಕುಮಾರ್ ಎಂಬವರು ಮೃತಪಟ್ಟರು.
ಗೋವೆಯ ಬೀಚುಗಳಲ್ಲಿ ಇದೇ ಜೂನ್ 1ರಿಂದ ಮುಂದಿನ ನಾಲ್ಕು ತಿಂಗಳ ಕಾಲ ಈಜುವುದನ್ನು ಮತ್ತು ಅಪಾಯಕಾರಿಯಾಗಿ ಕಡಲಿಗೆ ಇಳಿಯುವುದನ್ನು ನಿಷೇಧಿಸಲಾಗಿದೆ.