Advertisement

ಕನ್ನಡಕ್ಕೆ ಎರಡು ಸಾವಿರ ವರ್ಷ ಇತಿಹಾಸ

09:48 PM Nov 01, 2019 | Lakshmi GovindaRaju |

ಕೊಳ್ಳೇಗಾಲ: ಕನ್ನಡಕ್ಕೆ ಎರಡು ಸಾವಿರ ಇತಿಹಾಸವಿದೆ. ಇದನ್ನು ಉಳಿಸಲು ಬೆಳೆಸಲು ಎಲ್ಲರೂ ಶ್ರಮಿಸಬೇಕೆಂದು ಹನೂರು ಶಾಸಕ ಆರ್‌.ನರೇಂದ್ರ ಸಲಹೆ ನೀಡಿದರು. ಪಟ್ಟಣದ ಎಂಜಿಎಸ್‌ವಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ 64ನೇ ಕರ್ನಾಟಕ ರಾಜೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತಿಹಾಸವಿರುವ ಕನ್ನಡವನ್ನು ಮತ್ತಷ್ಟು ಅತ್ಯುನ್ನತ ಮಟ್ಟಕ್ಕೆ ಬೆಳೆಸುವ ಪ್ರಯತ್ನ ಮಾಡುವ ಅವಶ್ಯಕತೆ ಇದೆ ಎಂದರು.

Advertisement

ಅನ್ಯ ಭಾಷೆಗಳ ಪ್ರಭಾವಕ್ಕೆ ಒಳಗಾಗಬೇಡಿ: ಕನ್ನಡಿಗರ ಮಾತೃಭಾಷೆ ಕನ್ನಡ. ಕನ್ನಡವೇ ಮಕ್ಕಳ ಮಾತೃ ಭಾಷೆಯಾಗಿದ್ದು, ಮಕ್ಕಳಿಗೆ ಅವರ ಪೋಷಕರು ಬಾಲ್ಯದಿಂದಲೇ ಮನದಟ್ಟು ಮಾಡಿಕೊಡುವ ಪ್ರಯತ್ನವನ್ನು ಮಾಡಬೇಕು. ಅನ್ಯಭಾಷೆಗಳಿಗೆ ಒಳಗಾಗದೆ ಕನ್ನಡವೇ ನಿತ್ಯ, ಕನ್ನಡವೇ ಸತ್ಯ ಎಂದು ಬೋಧಿಸಿದಾಗ ಮಾತ್ರ 64ನೇ ಕರ್ನಾಟಕ ರಾಜೋತ್ಸವ ಯಶಸ್ವಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕನ್ನಡಿಗರಿ ಹೆಚ್ಚಿನ ಪ್ರಾಮುಖ್ಯತೆ ನೀಡಿ: ರಾಜ್ಯ ಸರ್ಕಾರ ಕರ್ನಾಟಕ ರಾಜೋತ್ಸವ ಅಂಗವಾಗಿ ವಿವಿಧ ಕನ್ನಡ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವುದು ಮತ್ತು ಕನ್ನಡಿಗರಿಗೆ ಉದ್ಯೋಗ ನೀಡುವ ತೀರ್ಮಾನ ಕೈಗೊಂಡಿರುವುದು ಸ್ವಾಗತ. ಇದೇ ರೀತಿ ರಾಜ್ಯ ಸರ್ಕಾರ ರಾಜ್ಯದ ಕನ್ನಡಿರಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಕನ್ನಡಕ್ಕೆ ಮತ್ತಷ್ಟು ಹಿರಿಮೆ ತರುವ ಪ್ರಯತ್ನ ಮಾಡಿ: 64ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ವೇಳೆ ಏಕೀಕರಣಕ್ಕಾಗಿ ದುಡಿದ ಮಹಾನೀಯರನ್ನು ಪ್ರತಿಯೊಬ್ಬರು ನೆನೆಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಕನ್ನಡದ ತೇರನ್ನು ಮತ್ತಷ್ಟು ಮುಂದೆ ಎಳೆದು ಕನ್ನಡಕ್ಕೆ ಮತ್ತಷ್ಟು ಹಿರಿಮೆ ತರುವ ಪ್ರಯತ್ನ ಪ್ರತಿಯೊಬ್ಬರು ಮಾಡಬೇಕಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಸನ್ಮಾನ: ಕನ್ನಡದಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದ ವಿವಿಧ ಶಾಲೆಯ ವಿದ್ಯಾರ್ಥಿಗಳಾದ ಕಮಲ, ಮನೋಜ್‌, ಪೂರ್ವಿ, ಸಹನ, ರಕ್ಷಿತ, ರಂಜಿತ, ಶ್ರೇಯಸ್‌, ಸಿಂಚನ ಸೇರಿದಂತೆ ಹಲವಾರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

Advertisement

ಸಾಧಕರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ಕರಾಟೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಜಯಗಳಿಸಿದ ಕರಾಟೆ ಪಟುಗಳಾದ ರಂಜಿತ, ಶಿಲ್ಪ, ಸೌಭಾಗ್ಯಲಕ್ಷ್ಮಿ, ಸೌಮ್ಯ, ಧ್ರುವ, ಮನುಕುಮಾರ್‌ ರವರನ್ನು ಸನ್ಮಾನಿಸಲಾಯಿತು.

ಮಾತೃಭಾಷೆಯಲ್ಲಿ ಮಾತನಾಡಿ: ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕೆಸ್ತೂರು ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಎನ್‌.ಶಿವಕುಮಾರಸ್ವಾಮಿ ಮಾತನಾಡಿ ಮಾತೃ ಭಾಷೆ ತಾಯಿಯ ಎದೆ ಹಾಲು ಕುಡಿದಂತೆ ಇದರ ಪ್ರೇಮ ಎಲ್ಲೆಲ್ಲೂ ಇರಬೇಕು. ಕನ್ನಡ ಭಾಷೆ ಅಧಿಕೃತ ಭಾಷೆಯಾಗಬೇಕು. ಪರಭಾಷೆಯೊಂದಿಗೆ ಮಾತೃಭಾಷೆಯಲ್ಲಿ ಮಾತನಾಡಿಬಾರದು. ಮಾತೃ ಭಾಷೆ ಉದ್ದಾರವಾಗಬೇಕಾದರೆ ಶಾಲೆಗಳಿಂದ ಮಾತ್ರ ಸಾಧ್ಯ ಎಂದರು.

ವಿಶೇಷ ಉಪನ್ಯಾಸ: ರಾಜ್ಯದಲ್ಲಿ ಹಲವಾರು ಶ್ರೀಮಂತರು ಇದ್ದು, ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಕನ್ನಡ ಶಿಕ್ಷಣವನ್ನು ಹೆಚ್ಚು ಪ್ರೋತ್ಸಾಹಿಸುವ ಮೂಲಕ ಆಂಗ್ಲ ಭಾಷೆಗೆ ಕಡಿವಾಣ ಹಾಕಲು ಮುಂದೆ ಬರಬೇಕು. ಆಗ ಮಾತ್ರ ಕನ್ನಡಕ್ಕೆ ಮತ್ತಷ್ಟು ಹಿರಿತನ ಬರಲಿದೆ. ಕನ್ನಡಕ್ಕೆ ಎರಡು ಸಾವಿರ ವರ್ಷದ ಇತಿಹಾಸವಿದೆ. ಇಂಗ್ಲಿಷ್‌ ಭಾಷೆಗೆ ಕೇವಲ ಐವತ್ತು ವರ್ಷ ಮಾತ್ರ ಇದ್ದು, ಕನ್ನಡವನ್ನು ಎಂದೂ ಕಡೆಗಣಿಸಬಾರದು ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.

ಪ್ರಾದೇಶಿಕ ಭಾಷೆ ಉಳಿಸಿ: ಶಾಸಕ ಎನ್‌.ಮಹೇಶ್‌ ಮಾತನಾಡಿ, ಒಂದು ದೇಶದಲ್ಲಿ ಸಾವಿರಾರು ಭಾಷೆಗಳು ಇರುತ್ತದೆ. ಆದರೆ ಸಂಬಂಧಿಸಿದ ಪ್ರಾದೇಶಿಕ ಭಾಷೆಯನ್ನು ಉಳಿಸಿಬೆಳೆಸಬೇಕಾದದ್ದು ಎಲ್ಲರ ಕರ್ತವ್ಯವಾಗಿದೆ. ಭಾಷೆ ಬೆಳೆಯಲು ಸ್ವತಂತ್ರ ಬೇಕೆಂದು ಹೇಳಿದರು.

ಹಿಂದಿ ಹೇರಿಕೆ ಬೇಡ: ಕನ್ನಡ ನಶಿಸಿಹೋದರೆ ವಚನ ತತ್ವ ನಶಿಸಿ ಹೋಗುತ್ತದೆ. ಕನ್ನಡ ಭಾಷೆಯ ಮೇಲೆ ಯಾವುದೆ ಭಾಷೆಯನ್ನು ಹೇರಬಾರದೆಂದು ಸರ್ಕಾರಕ್ಕೆ ಮನವಿ ಮಾಡಿದ ಶಾಸಕರು ಹಿಂದಿ ಭಾಷೆಯನ್ನು ಕಡ್ಡಾಯ ಮಾಡಬಾರದು ಎಂದು ಒತ್ತಾಯಿಸಿದರು.

ರಾಷ್ಟ್ರ ಕಟ್ಟೋಣ: ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಐಕ್ಯತೆಯ ದಿನದಂದು ಪ್ರತಿಯೊಬ್ಬರು ಪ್ರಮಾಣವಚನ ಪಡೆಯಲಾಗಿದೆ. ಅದೇ ರೀತಿ ತತ್ವ ಸಿದ್ಧಾಂತಕ್ಕೆ ಎಲ್ಲಾ ಸಂಸ್ಕೃತಿಗಳನ್ನು ಗೌರವಿಸಿ ರಾಷ್ಟ್ರ ಕಟ್ಟೋಣ. ಭಾರತದ ವಿವಿಧತೆಯಲ್ಲಿ ಏಕತೆಯನ್ನು ಕಾಣೋಣ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ: ಪಟ್ಟಣದ ವಿವಿದ ಶಾಲೆಗಳಿಂದ ಆಗಮಿಸಿದ್ದ ಮಕ್ಕಳು ಮನಮೋಹಕ ಮನರಂಜನೆಯನ್ನು ನೀಡಿ ಪಾಲ್ಗೊಂಡಿದ್ದ ಸಮಸ್ತ ಸಾರ್ವಜನಿಕರನ್ನು ರಂಜಿಸುವಂತೆ ಮಾಡಿದರು.

ಉಪ ವಿಭಾಗಾಧಿಕಾರಿ ನಿಖೀತ ಎಂ.ಚಿನ್ನಸ್ವಾಮಿ, ತಾಪಂ ಅಧ್ಯಕ್ಷ ರಾಜೇಂದ್ರ, ಉಪಾಧ್ಯಕ್ಷೆ ಲತಾ ರಾಜಣ್ಣ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಂಜುಂಡಸ್ವಾಮಿ, ಡಿವೈಎಸ್ಪಿ ನವೀನ್‌ಕುಮಾರ್‌, ತಹಶೀಲ್ದಾರ್‌ ಕೆ.ಕುನಾಲ್‌, ನಗರಸಭೆ ಪೌರಾಯುಕ್ತ ನಾಗಶೆಟ್ಟಿ, ಇಒ ಶ್ರೀನಿವಾಸ್‌. ಬಿಇಒ ಚಂದ್ರಪಾಟೀಲ್‌, ಎಸ್‌ಐಗಳಾದ ರಾಜೇಂದ್ರ, ಅಶೋಕ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next