ಗದಗ: ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರದಂತೆ ಯುವ ರೈತರನ್ನು ತೋಟಗಾರಿಕೆ ಬೆಳೆಗಳತ್ತ ಆಕರ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 2 ಸಾವಿರ ಹೊಸ ತೋಟಗಳನ್ನು ನಿರ್ಮಿಸಲು ತೋಟಗಾರಿಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಪಂ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ ಸೂಚಿಸಿದರು.
ನಗರದ ಜಿಪಂ ಅಧ್ಯಕ್ಷರ ಕೊಠಡಿಯಲ್ಲಿ ನಡೆದ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ನೆರೆಯಿಂದಾಗಿ ಜಿಲ್ಲೆಯಲ್ಲಿ ತೋಟಗಳು ವಿನಾಶದ ಅಂಚಿಗೆ ತಲುಪಿವೆ. ಇಲಾಖೆಯ ಯೋಜನೆಗಳನ್ನು ಬಳಸಿಕೊಂಡು ಅಂತಹ ತೋಟಗಳನ್ನು ಪುನಶ್ಚೇತನಗೊಳಿಸಬೇಕು. ಇದಕ್ಕೆ ಸಂಬಂಧಿಸಿ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅಧಿಕಾರಿಗಳು ಗಮನ ಹರಿಸಬೇಕು. ಜಿಲ್ಲೆಯ ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಡೆದು, ವರ್ಷಪೂರ್ತಿ ಉದ್ಯೋಗ ನೀಡಿ, ರೈತರಿಗೆ ಆದಾಯ ತರುವಂತೆ ತೋಟಗಾರಿಕೆ ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಯುವ ರೈತ ಸಮುದಾಯವನ್ನು ಒಂದೆಡೆ ಸೇರಿಸಿ, ಜಿಲ್ಲೆಯಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆಗೈದ ರೈತರೊಂದಿಗೆ ಸಂವಾದ ನಡೆಸಬೇಕು. ಇದರಿಂದ ರೈತರು ಪ್ರೇರಣೆ ಪಡೆದು ತೋಟ ನಿರ್ಮಾಣಕ್ಕೆ ಮುಂದಾಗುವರು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಪಂ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ ಸೂಚಿಸಿದರು.
ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಮಾತನಾಡಿ, ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಹಾಗೂ ಸಬ್ಸಿಡಿಗಳ ಕುರಿತು ರೈತರಿಗೆ ಅರಿವು ಮೂಡಿಸಬೇಕು. ಸರಕಾರದ ಸೌಲಭ್ಯಗಳನ್ನು ಅರ್ಹರಿಗೆ ಒದಗಿಸಬೇಕು. ಜಿಲ್ಲೆಯ ರೈತರು ಸಹ ತೋಟಗಾರಿಕೆಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಿದ್ಧರಿದ್ದು, ಅಧಿಕಾರಿಗಳು ಸಹಕಾರ ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಶೈಲೇಂದ್ರ ಬೀರಾದರ ಸೇರಿದಂತೆ ಇತರರಿದ್ದರು.