ಬೆಂಗಳೂರು: ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ತಮಿಳುನಾಡು ಮೂಲದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚೆನ್ನೈ ಮೂಲದ ಕಾರ್ತೀಕ್ (35) ಮತ್ತು ಗೋಪಿ (37) ಬಂಧಿತರು. ಅವರಿಂದ 5.65 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸುತ್ತಿದ್ದ ಎರಡು ದ್ವಿಚಕ್ರವಾಹನ, ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಮಾ.4ರಂದು ತುಂಗಾನಗರದ ರಿಯಲ್ ಎಸ್ಟೇಟ್ ಡೀಲರ್ ಜಯರಾಮ್ ಎಂಬುವವರು ನಿವೇಶನವೊಂದಕ್ಕೆ ಸಂಬಂಧಿಸಿದ ಹಣವನ್ನು ಕಾರಿನಲ್ಲಿ ಇರಿಸಿಕೊಂಡು ಹೋಗುತ್ತಿದ್ದರು. ಮಾರ್ಗ ಮಧ್ಯೆ ಆಂಧ್ರಹಳ್ಳಿ ರಸ್ತೆಯಲ್ಲಿ ಹಿಂಬದಿಯಿಂದ ಪಲ್ಸರ್ ಬೈಕ್‌ನಲ್ಲಿ ಬಂದ ಆರೋಪಿಗಳು, ಕಾರಿನ ಟಯರ್ ಪಂಕ್ಚರ್ ಆಗಿದೆ ಎಂದು ಕಾರು ಚಲಾಯಿಸುತ್ತಿದ್ದ ಜಯರಾಮ್ ಅವರ ಗಮನ ಬೇರೆಡೆ ಸೆಳೆದು, ಸೀಟಿನ ಮೇಲಿದ್ದ ಹಣದ ಬ್ಯಾಗ್ ಎಗರಿಸಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಬ್ಯಾಂಕ್‌ಗಳು, ಸಬ್ ರಿಜಿಸ್ಟ್ರರ್ ಕಚೇರಿಗಳು, ಫೈನಾನ್ಸ್‌ಗಳು ಸೇರಿ ಹೆಚ್ಚು ಹಣಕಾಸು ವ್ಯವಹಾರ ನಡೆಯುವ ಸ್ಥಳಗಳಲ್ಲಿ ಹೊಂಚು ಹಾಕುತ್ತಿದ್ದರು. ಹಣದೊಂದಿಗೆ ಬರುವವರನ್ನು ಟಾರ್ಗೆಟ್ ಮಾಡಿ, ಅವರ ವಾಹನವನ್ನು ಹಿಂಬಾಲಿಸುತ್ತಿದ್ದರು. ಬಳಿಕ ಸಮಯ ನೋಡಿ ದ್ವಿಚಕ್ರ ವಾಹನದಲ್ಲಿ ಕಾರಿನ ಹತ್ತಿರ ಬಂದು ಕಿಟಕಿ ಬಡಿದು, ಟೈಯರ್ ಪಂಕ್ಚರ್ ಆಗಿ ಎಂದು ಹೇಳಿ, ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ಬಸವೇಶ್ವರನಗರ, ಚಂದ್ರಾಲೇಔಟ್, ಬ್ಯಾಡರಹಳ್ಳಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಐದು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದರು.
ಕಳ್ಳತನವೇ ವೃತ್ತಿ : ಆರೋಪಿಗಳು ಕಳ್ಳತನಕ್ಕಾಗಿಯೇ ಚೆನ್ನೈನಿಂದ ನಗರಕ್ಕೆ ಬರುತ್ತಿದ್ದು, ಆಂಧ್ರಪ್ರದೇಶದ “ಓಜಿಕುಪ್ಪಂ ಗ್ಯಾಂಗ್’ ಮಾದರಿಯಲ್ಲಿ ಗ್ಯಾಂಗ್ ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದರು. ಈ ಗ್ಯಾಂಗ್ ನ ಇತರೆ ಸದಸ್ಯರು ನಗರ ಸೇರಿ ದೇಶದ ವಿವಿಧೆಡೆ ಅಪರಾಧ ಕೃತಗಳಲ್ಲಿ ತೊಡಗಿದ್ದಾರೆ. ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.