ರಜೌರಿ: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಸೇನಾಪಡೆಗಳು ಮತ್ತು ಪೊಲೀಸರು ಭಾರೀ ಕಾರ್ಯಾಚರಣೆ ನಡೆಸಿ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಸೇರಿ ಇಬ್ಬರು ಉಗ್ರರನ್ನು ಗುರುವಾರ ಹತ್ಯೆಗೈಯುವಲ್ಲಿ ಯಶಸ್ವಿಯಾಗಿವೆ.
ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ಇಬ್ಬರು ಸೇನಾ ಅಧಿಕಾರಿಗಳು ಸೇರಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಬುಧವಾರ ಸಂಜೆ ನಾಲ್ವರು ಕೊನೆಯುಸಿರೆಳೆದಿದ್ದು , ಗಂಭೀರವಾಗಿ ಗಾಯಗೊಂಡಿದ್ದ ಯೋಧ ಉಧಮ್ ಪುರದ ಸೇನಾ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.
ರಾತ್ರಿಯಿಡೀ ಸ್ಥಗಿತಗೊಂಡಿದ್ದ ಗುಂಡಿನ ಚಕಮಕಿ ಗುರುವಾರ ಬೆಳಗ್ಗೆ ಪುನರಾರಂಭವಾಗಿತ್ತು. ಭಯೋತ್ಪಾದಕರು ತಪ್ಪಿಸಿಕೊಳ್ಳದಂತೆ ಹೆಚ್ಚುವರಿ ಭದ್ರತಾ ಪಡೆಗಳನ್ನು ಅರಣ್ಯ ಪ್ರದೇಶದ ಸುತ್ತ ಇರಿಸಿ ಸರ್ಪಗಾವಲು ಹಾಕಲಾಗಿತ್ತು.
ಹತ್ಯೆಗೀಡಾದವರಲ್ಲಿ ಪಾಕಿಸ್ಥಾನದ ಎಲ್ ಇ ಟಿ ಕಮಾಂಡರ್ ಕ್ವಾರಿ ಎಂದು ಗುರುತಿಸಲಾಗದೆ. ಏಳು ಜನರನ್ನು ಬಲಿ ಪಡೆದಿದ್ದ ಧಂಗ್ರಿ ಮತ್ತು ಕಂಡಿ ಅವಳಿ ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದು, ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸಲು ರಾಜೌರಿ-ಪೂಂಚ್ ನಲ್ಲಿ ಸಕ್ರೀಯವಾಗಿದ್ದ ಎಂದು ಮೂಲಗಳು ತಿಳಿಸಿವೆ.
ಕ್ವಾರಿ IED ಗಳಲ್ಲಿ ಪರಿಣಿತನಾಗಿದ್ದು, ಗುಹೆಗಳಲ್ಲಿ ಅಡಗಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಮತ್ತು ತರಬೇತಿ ಪಡೆದ ಸ್ನೈಪರ್ ಕೂಡ ಆಗಿದ್ದ ಎಂದು ತಿಳಿದು ಬಂದಿದೆ.