Advertisement

ಎರಡು ಕತೆಗಳು

10:00 PM Aug 10, 2019 | mahesh |

ಅರ್ಧ ಮನೆ
ನೆಲಸಮಗೊಳಿಸಲಾದ ತಮ್ಮ ಮನೆಯ ಅಳಿದುಳಿದ ಅವಶೇಷಗಳ ಮೇಲೆ ಉರಿಬಿಸಿಲಿನಲ್ಲಿ ಕುಳಿತ ಗೋಪಾಲ ಮತ್ತು ಆತನ ಪತ್ನಿ ಸರಿತಾಳ ಮುಖ ಕಳಾಹೀನವಾಗಿತ್ತು. ಗೋಪಾಲ ಮುರಿದು ಬಿದ್ದ ತನ್ನ ಮನೆಯ ಅವಶೇಷಗಳತ್ತ ಮೌನವಾಗಿ ದಿಟ್ಟಿಸುತ್ತಿದ್ದ. ಕೆಲ ಸಮಯದ ನಂತರ ಸರಿತಾ ಮೌನ ಮುರಿದಳು.

Advertisement

“”ಅದೇಕೆ ಹಾಗೆ ನೋಡುತ್ತಿರುವಿರಿ ! ನಿಮ್ಮದೇ ಮನೆ!”
ಗೋಪಾಲ ಸ್ವಲ್ಪ ಹೊತ್ತು ಆಕೆಗೆ ಉತ್ತರಿಸಲಿಲ್ಲ. ನಂತರ ನಿಧಾನವಾಗಿ ತುಟಿ ತೆರೆದು, “”ಆಗಿತ್ತು, ಯಾವತ್ತೋ… ಈಗಲ್ಲ. ಈಗ ಇದು ಇಸ್ಪೀಟು, ಜೂಜು ಆಡುವವರ ಅಡ್ಡೆ. ಅವರನ್ನು ಬಿಟ್ಟರೆ ಒಂದಿಷ್ಟು ಹಂದಿಗಳು, ಬೀದಿನಾಯಿಗಳು ಗೊರಕೆ ಹೊಡೆಯಬಹುದು. ಅವು ಒಂದಿಷ್ಟು ಮರಿಗಳನ್ನು ಹುಟ್ಟಿಸುವ ಕೇಂದ್ರ” ಎಂದ.

“”ಹಾ… ಹೌದು…” ಭಾರವಾದ ಉಸಿರನ್ನು ಒಮ್ಮೆ ಹೊರಹಾಕಿದ ಸರಿತಾಗೆ, ಅಲ್ಲಿಯೇ ಬಿದ್ದಿದ್ದ ಸುಣ್ಣದ ಡಬ್ಬಿ ಕಂಡಿತು. ಎತ್ತಿಕೊಳ್ಳುತ್ತ, “”ನನಗೆ ಇದು ಎಷ್ಟು ಪ್ರಿಯವಾಗಿತ್ತು. ನಿಮಗೆ ಅದೆಷ್ಟು ಬಾರಿ ಇದರಿಂದ ಸುಣ್ಣವನ್ನು ತೆಗೆದು ಕವಳ ಸಿದ್ಧಪಡಿಸಿದ್ದೆ!”

ಪಕ್ಕದಲ್ಲಿದ್ದ ಒಂದು ಕಲ್ಲಿನ ಮೇಲೆ ಕುಳಿತ ಗೋಪಾಲ ಹೇಳಿದ, “”ಇದರ ಮೇಲೆ ಕುಳಿತು ನಾನು ಪ್ರತಿನಿತ್ಯ ಮುಖ ತೊಳೆಯುತ್ತಿದ್ದೆ. ಹಲ್ಲು ಉಜ್ಜುತ್ತಿದ್ದೆ”
ಕಲ್ಲಿನ ಅಡಿಯಿಂದ ಒಂದು ಹಳೆಯ ಸ್ಟವ್‌ ಹೊರತೆಗೆದು ಸರಿತಾ ಹೇಳಿದಳು, “”ನಾನು ಇದರ ಮೇಲೆ ಚಹಾ ಮಾಡಿ ನಿಮಗೆ ನೀಡುತ್ತಿದ್ದೆ. ನೀವು ಬಿಸಿ ಚಹಾ ಕುಡಿದು ನನ್ನ ಹೆಗಲಿಗೆ ಒರಗುತ್ತಿದ್ದೀರಿ”

ಹೆಂಡತಿಯ ಕೈಯಲ್ಲಿದ್ದ, ಮುರಿದು ಮುರುಕಲಾಗಿ, ಕರಕಲಾಗಿ ಹೋಗಿದ್ದ ಸ್ಟವ್‌ ಕಡೆಗೆ ನೀರಸವಾದ ದೃಷ್ಟಿಯನ್ನು ಬೀರುತ್ತ ಗೋಪಾಲ ಹೇಳಿದ, “”ನಮ್ಮ ಬಳಿ ಇನ್ನೇನಿತ್ತು, ಬಡತನವನ್ನು ಹೊರತುಪಡಿಸಿ. ಬೀದಿಯಲ್ಲಿ ಮಲಗುವುದನ್ನು ಈ ಮನೆ ತಡೆದಿತ್ತು. ತಮ್ಮನಿಗೆ ಮದುವೆಯಾದಾಗ, ಆತನ ಹೆಂಡತಿ ಜಗಳಗಂಟಿ ಎಂದು ತಿಳಿದಾಗ, ನಾವು ಮನೆಯನ್ನು ಎರಡು ಪಾಲು ಮಾಡಿಕೊಂಡಾಗ, ನಮ್ಮ ಪಾಲನ್ನು ಮಾರಿಕೊಳ್ಳಬಹುದಿತ್ತು. ಆದರೆ, “ಮನೆ ಮುರಿಯಬಾರದು, ಅಣ್ಣ-ತಮ್ಮ ಚೆನ್ನಾಗಿರಬೇಕು’ ಎನ್ನುವುದು ಅಪ್ಪನ ಕೊನೆಯ ಆಸೆಯಾಗಿತ್ತು. ತಮ್ಮ ಅಪಘಾತದಲ್ಲಿ ಸಾವನ್ನಪ್ಪಿದಾಗ ಆತನ ಸಂಸಾರದ ಜವಾªರಿಯನ್ನೂ ನಾನೇ ಹೊರಬೇಕಾಯಿತು. ಈಗ ಆತನ ಮಗ ಸೂರಿ ದೊಡ್ಡವನಾಗಿದ್ದಾನೆ.”

Advertisement

“”ದೊಡ್ಡವನಾಗಿ ಏನು ಪ್ರಯೋಜನ!”
“”ಒಂದು ವೇಳೆ ಆ ಕಾಲದಲ್ಲಿಯೇ ನಮ್ಮ ಪಾಲಿನ ಜಾಗವನ್ನು ಮಾರಿಕೊಂಡು ಹಣವನ್ನು ಬ್ಯಾಂಕ್‌ನಲ್ಲಿ ಇಟ್ಟಿದ್ದರೆ, ಅದರ ಬಡ್ಡಿಯಲ್ಲಿ ಒಂದು ಸಣ್ಣ ಮುರುಕು ಮಂಚವನ್ನಾದರೂ ಖರೀದಿಸಬಹುದಿತ್ತು. ನೆಲದ ಮೇಲೆ ಮಲಗಿ ಮೈ ನೋಯಿಸಿಕೊಳ್ಳಬೇಕಿರಲಿಲ್ಲ. ಹೊಗೆಯುಗುಳುವ ಬೆಂಕಿ ಒಲೆಯ ಬದಲಿಗೆ ಒಂದು ಗ್ಯಾಸ್‌ ಸ್ಟವ್‌ ಖರೀದಿಸಬಹುದಾಗಿತ್ತು. ನೀನು ಕೆಮ್ಮುವುದಾದರೂ ತಪ್ಪುತ್ತಿತ್ತು.”

ಸರಿತಾಳ ಬಾಯಿ ನಿಲ್ಲಲಿಲ್ಲ, “”ನಾನು ಉಬ್ಬಸದಿಂದ ಬಳಲಬೇಕಿರಲಿಲ್ಲ. ನಿಮಗೆ ಒಂದು ಒಳ್ಳೆಯ ಅಂಗಿ-ಪಂಚೆ, ನನಗೊಂದು ಸೀರೆ, ಒಂದು ಫ‌ುಲ್‌ ಸ್ವೆಟರ್‌ ಏನನ್ನಾದರೂ ಖರೀದಿಸಬಹುದಿತ್ತು. ಮನಸ್ಸು ಮಾಡಲಿಲ್ಲ; ಮನೆ ಮುರಿಯಬಾರದೆಂದು. ಅತ್ತ ಜೀವಿಸಲೂ ಇಲ್ಲ, ಇತ್ತ ಸಾಯಲೂ ಇಲ್ಲ. ಹೆಚ್ಚಿನ ಆಸ್ತಿಯೂ ಇರಲಿಲ್ಲ”

“”ಬೇಗ ಬೇಗ ಕೆಲಸ ಮಾಡಿ. ಸಂಜೆಯೊಳಗೆ ಎಲ್ಲವೂ ನೆಲಸಮಗೊಳ್ಳಬೇಕು. ಯಾವುದೇ ಕೆಲಸ ಬಾಕಿ ಉಳಿಯಬಾರದು” ತಮ್ಮನ ಮಗ ಆಳುಗಳಿಗೆ ಜೋರಾಗಿ ಆದೇಶ ನೀಡುತ್ತಿದ್ದ. ಒಂದೆರಡು ಗೋಡೆಗಳನ್ನು ಒಡೆಯುವುದಿತ್ತು ಅಷ್ಟೇ. ಆತನಿಗೆ ಆತುರ, ಕೆಲಸ ಬೇಗ ಮುಗಿದುಬಿಡಲಿ ಎಂದು.

ತಮ್ಮನ ಮಗನ ಮಾತುಗಳನ್ನು ಕೇಳುತ್ತ ಗೋಪಾಲನಿಗೆ ಆ ದುಃಖಲ್ಲಿಯೂ ನಗು ಬಂದಿತು. ತಾನೇ ಕೈಯಾರೆ ಆಡಿಸಿ ಬೆಳೆಸಿದ ತಮ್ಮನ ಮಗ, ತನ್ನ ತಂದೆಯ ಪಾಲನ್ನು ಕೇಳಿ, ಜಗಳವಾಡಿ ಪಡೆದುಕೊಂಡು, ಮನೆಯನ್ನು ಬೀಳಿಸಿ, ನೆಲಸಮಗೊಳಿಸಿ, ಯಾರಿಗೋ ಮಾರುವುದಕ್ಕೆ ಹೊರಟಿರುವ ತಮ್ಮನ ಮಗ !

ಗೋಪಾಲನ ಕಾಲಿನ ಮೇಲೆ ನೀರು ಬಿದ್ದಿದ್ದನ್ನು ಸರಿತಾ ಗಮನಿಸಿದಳು. ಅದು ಆತನ ಹಣೆಯ ಬೆವರೋ, ಕಣ್ಣೀರೋ ಆಕೆ ಸರಿಯಾಗಿ ಗಮನಿಸಲಿಲ್ಲ. ಗೋಪಾಲನಿಗೆ ಅರಿವಿಲ್ಲದಂತೆಯೇ ಆತನ ಕೈಗಳು ಮುರಿದ ಸ್ಟವ್‌ ಅನ್ನು ರಿಪೇರಿ ಮಾಡುವ ಪ್ರಯತ್ನ ನಡೆಸಿದ್ದವು. ಎದುರು ಮನೆಯ ಹುಡುಗ ಇವರತ್ತಲೇ ನೋಡುತ್ತಿದ್ದ. ಗೋಪಾಲ ನೇರವಾಗಿ ಆತನ ಬಳಿಗೆ ಹೋಗಿ ಒಂದು ಸಣ್ಣ ಚಾಕ್‌ಪೀಸನ್ನು ಪಡೆದುಕೊಂಡು, ಮತ್ತೆ ತಾನು ಈ ಹಿಂದೆ ಕುಳಿತಿದ್ದ ಜಾಗಕ್ಕೆ ಬಂದು, ಅಲ್ಲಿ ಉಳಿದುಕೊಂಡಿದ್ದ ಗೋಡೆಯ ಒಂದು ಭಾಗದ ಮೇಲೆ ದೊಡ್ಡದಾಗಿ ಬರೆದ…
“ಅರ್ಧ ಮನೆ ಮಾರಾಟಕ್ಕಿದೆ’

ಹೊಸ ಅಮ್ಮ
ಲಕ್ಷಾಂತರ, ಕೋಟ್ಯಾಂತರ ತಾರೆಗಳಿಂದ ಆಕಾಶ ಕಂಗೊಳಿಸುತ್ತಿತ್ತು. ಅದೇ ರೀತಿಯ ನೂರಾರು, ಸಾವಿರಾರು ನೆನಪುಗಳಿಂದ, ಮುಖ್ಯವಾಗಿ ಅಮ್ಮನ ನೆನಪುಗಳಿಂದ ಆಕೆಯ ಮನಸ್ಸು ಹೊಸದೊಂದು ಲೋಕಕ್ಕೆ ತೆರಳಿತ್ತು. “ತುಂಬಾ ಮೃದು ಸ್ವಭಾವದ ಅಮ್ಮ, ನನ್ನ ಕೈ ಬೆರಳುಗಳನ್ನು ಹಿಡಿದುಕೊಂಡು ನಡೆಯುವುದನ್ನು ಕಲಿಸುತ್ತಿದ್ದ ಅಮ್ಮ, ಊಟ ಮಾಡಿದ ನನ್ನ ಕೈಯನ್ನು ತೊಳೆಸಿ ತನ್ನ ಸೀರೆಯ ಸೆರಗಿಗೆ ಕೈಗಳನ್ನು ಒರೆಸಿ ಸ್ವತ್ಛಗೊಳಿಸುತ್ತಿದ್ದ ಅಮ್ಮ, ನನ್ನ ಮೂಗಿನ ಗೊಣ್ಣೆಯನ್ನು ಸ್ವಲ್ಪವೂ ಬೇಸರಿಸದೇ ತೆಗೆದು ಶುದ್ಧ ನೀರಿನಿಂದ ಮೂಗನ್ನು ತೊಳೆಯುತ್ತಿದ್ದ ಅಮ್ಮ, ಬಣ್ಣ ಬಣ್ಣದ ಬಳೆಗಳನ್ನು ಕೊಡಿಸುತ್ತಿದ್ದ ಅಮ್ಮ, ತಾನು ಅರ್ಧ ತಿಂದಾದರೂ ನನಗೆ ಮೂರು ಇಡೀ ದೋಸೆಯನ್ನು ತಿನ್ನಿಸುತ್ತಿದ್ದ ಅಮ್ಮ, ಹೊರಟೇ ಹೋಗಿದ್ದಳು, ಎಂದೂ ಮರಳಿ ಬಾರದ ಲೋಕಕ್ಕೆ, ದೂರಕ್ಕೆ, ಬಹು ದೂರಕ್ಕೆ…’

ಆ ಸಮಯದಲ್ಲಿ ವಸುಧಾ ಬಹಳ ಚಿಕ್ಕವಳಾಗಿದ್ದಳು. ಆಕೆಗೆ ಆಗ ತನ್ನ ತಾಯಿಯ ಸಾವಿನ ಬಗ್ಗೆ ಅರ್ಥವಾಗಿದ್ದು ಇಷ್ಟೇ, ತನ್ನ ಅಮ್ಮ ದೇವರ ಬಳಿಗೆ ಹೋಗಿದ್ದಾಳೆ, ದೂರಕ್ಕೆ, ಬಹು ದೂರಕ್ಕೆ.

ಈ ದಿನ ಆಕೆಯನ್ನು ಕರೆದುಕೊಂಡು ಹೋಗುವುದಕ್ಕೆ ಮತ್ತೂಬ್ಬಳು ಅಮ್ಮ ಬರುತ್ತಿದ್ದಾಳೆ.
“”ವಸುಧಾ ಅವರೇ, ನಿಮ್ಮನ್ನು ಕರೆದುಕೊಂಡು ಹೋಗುವುದಕ್ಕೆ ಪ್ರೀತಿ ಬಂದಿದ್ದಾರೆ. ಇನ್ನು ಮುಂದೆ ನಿಮಗೆ ಆಕೆಯೇ “ಅಮ್ಮ.’ ಅವರ ಮನೆಯನ್ನು ಚೆನ್ನಾಗಿ ನೋಡಿಕೊಳ್ಳುವುದಷ್ಟೇ ನಿಮ್ಮ ಕೆಲಸ. ಅಲ್ಲಿ ನನ್ನ ಹೆಸರನ್ನು ಕೆಡಿಸಬೇಡಿ”

ವೃದ್ಧಾಶ್ರಮದ ಕೇರ್‌ಟೇಕರ್‌ ಧ್ವನಿ ಎಪ್ಪತ್ತರ ಹರೆಯದ ವಸುಧಾಳಿಗೆ ಜೋರಾಗಿ ಕೇಳಿಸಿತು. ವಸುಧಾಳ ನೆನಪಿನ ಸೌಧ ಮಾಯವಾಗಿತ್ತು. ಎದುರಿನಲ್ಲಿ ಹೂವಿನ ಬೊಕ್ಕೆೆಯನ್ನು ಹಿಡಿದು ಆಕೆಯ ಮಗಳ ವಯಸ್ಸಿನ ಪ್ರೀತಿ ನಿಂತಿದ್ದಳು. ಆಕೆಯನ್ನು ಹೊಸ “ಅಮ್ಮ’ನೊಂದಿಗೆ ಕಳುಹಿಸಿಕೊಡುವುದಕ್ಕೆ ಆ ಕೇರ್‌ ಟೇಕರ್‌ ಆತುರಪಡುತ್ತಿದ್ದಳು. ಆಕೆಯ ಕೈಯಲ್ಲಿ ಪ್ರೀತಿ ನೀಡಿದ ನೋಟಿನ ಕಂತೆಯಿತ್ತು.

ನಾಗ ಎಚ್‌. ಹುಬ್ಳಿ

Advertisement

Udayavani is now on Telegram. Click here to join our channel and stay updated with the latest news.

Next