Advertisement

ವಿಚಾರವಾದಿ ಪ್ರೊ.ಭಗವಾನ್‌ ವಿರುದ್ಧ ಎರಡು ಪ್ರತ್ಯೇಕ ದೂರು

05:53 AM Dec 29, 2018 | |

ಮೈಸೂರು: ವಿಚಾರವಾದಿ ಪ್ರೊ.ಕೆ.ಎಸ್‌.ಭಗವಾನ್‌ ಅವರ ರಾಮ ಮಂದಿರ ಏಕೆ ಬೇಕು? ಎಂಬ ಪುಸ್ತಕದಲ್ಲಿ ಶ್ರೀರಾಮ ಮದ್ಯ ಸೇವಿಸುತ್ತಿದ್ದ, ಮಾಂಸಾಹಾರ ತಿನ್ನುತ್ತಿದ್ದ ಎಂದು ಬರೆದು ಅಪಮಾನ ಮಾಡಿರುವುದನ್ನು ವಿರೋಧಿಸಿ ರಾಮ ಭಕ್ತರು ಶುಕ್ರವಾರ ಕುವೆಂಪು ನಗರದಲ್ಲಿನ ಪ್ರೊ.ಭಗವಾನ್‌ ಅವರ ಮನೆ ಎದುರು ಶ್ರೀರಾಮನ ಫೋಟೋ ತಂದು ಪೂಜೆ ಮಾಡಲು ಮುಂದಾದಾಗ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. 

Advertisement

ಹಿಂದೂ ಪರ ಕಾರ್ಯಕರ್ತ ನಿಶಾಂತ್‌ ನೇತೃತ್ವದಲ್ಲಿ ಹಲವು ಕಾರ್ಯಕರ್ತರು ಶ್ರೀರಾಮನ ಫೋಟೋ ತಂದು ಪೂಜೆ ಮಾಡಲು ಮುಂದಾದರು. ಆದರೆ, ರಸ್ತೆ ಮಧ್ಯೆ ಪೂಜೆ ಮಾಡಲು ಅನುಮತಿ ನೀಡಿಲ್ಲ ಎಂದು ಪೊಲೀಸರು ತಡೆಯಲು ಮುಂದಾದರೆ, ನಾವು ಪೂಜೆ ಮಾಡುತ್ತಿಲ್ಲ,  ಪುಷ್ಪಾರ್ಚನೆ ಮಾಡುತ್ತಿದ್ದೇವೆ ಎಂದು ಹಿಂದೂ ಪರ ಕಾರ್ಯಕರ್ತರು ವಾದಿಸಿದರು. ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಉಂಟಾಗಿತ್ತು. ಕಡೆಗೆ ನಿಶಾಂತ್‌ ಸೇರಿದಂತೆ ನಾಲ್ವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದರು.

ಹೆಚ್ಚಿನ ಭದ್ರತೆ: ಮತ್ತೆ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಪ್ರೊ.ಕೆ.ಎಸ್‌.ಭಗವಾನ್‌ ಅವರ ಮನೆಗೆ 3 ಜನ ಇನ್ಸ್‌ಪೆಕ್ಟರ್‌, 15ಜನ ಪೊಲೀಸರು ಸೇರಿದಂತೆ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. 

ಪ್ರತ್ಯೇಕ: ಶ್ರೀರಾಮನಿಗೆ ಅಪಮಾನ ಮಾಡಿರುವ ಬಗ್ಗೆ ನಗರದ ವಿದ್ಯಾರಣ್ಯ ಪುರಂ ಮತ್ತು ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರೊ.ಕೆ.ಎಸ್‌.ಭಗವಾನ್‌ ವಿರುದ್ಧ ಪ್ರತ್ಯೇಕ ದೂರು ದಾಖಲಿಸಲಾಗಿದೆ. ವಿದ್ಯಾರಣ್ಯಪುರಂ ನಿವಾಸಿ ಸಂಜಯ್‌ ಎಂಬುವರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ವಿದ್ಯಾರಣ್ಯಪುರಂ ಠಾಣೆಯಲ್ಲಿ ದೂರು ದಾಖಲಿಸಿ, ಪ್ರೊ.ಭಗವಾನ್‌ರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಯುವ ಮೋರ್ಚಾ ದೂರು: ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ವಕೀಲ ಗೋಕುಲ್‌ ಗೋವರ್ಧನ್‌ ನಜರ್‌ಬಾದ್‌ ಪೊಲೀಸ್‌ ಠಾಣೆಗೆ ದೂರು ನೀಡಿ, ನನ್ನ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಪುಸ್ತಕವನ್ನು ಬರೆದು-ಪ್ರಕಟಿಸಿ, ನಾನು ದೇವರೆಂದು ಪೂಜಿಸುವ ಶ್ರೀರಾಮಚಂದ್ರ, ಸೀತಾಮಾತೆ ಮತ್ತು ಇನ್ನಿತರೆ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿರುವ ಪ್ರೊ.ಕೆ.ಎಸ್‌.ಭಗವಾನ್‌ ಮತ್ತು ಪುಸ್ತಕದ ಪ್ರಕಾಶಕರಾದ ಗದಗ್‌ನ ಮೆ.ಲಡಾಯಿ ಪ್ರಕಾಶನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

ಭದ್ರತೆ ಕೇಳಿಲ್ಲ: ನಾನು ಭದ್ರತೆಯನ್ನೂ ಕೇಳಿಲ್ಲ. ಆ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ನಾನು ಹೇಳಬೇಕಾದ್ದನ್ನೆಲ್ಲಾ ಈಗಾಗಲೇ ಪುಸ್ತಕದಲ್ಲಿ ಹೇಳಿದ್ದೇನೆ. ಆಸಕ್ತರು ಪುಸ್ತಕ ಓದಲಿ, ಪುಸ್ತಕದಲ್ಲಿನ ವಿಚಾರಗಳನ್ನು ಒಪ್ಪುವುದು, ಬಿಡುವುದು ಜನರಿಗೆ ಬಿಟ್ಟವಿಚಾರ ಅದರಿಂದ ನನಗೇನು ಆಗಬೇಕಾಗಿಲ್ಲ ಎಂದು ಪ್ರೊ.ಕೆ.ಎಸ್‌.ಭಗವಾನ್‌ ಹೆಚ್ಚಿನ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next