ರಾಯಚೂರು: ಸೆಮಿಸ್ಟರ್ ಪರೀಕ್ಷೆ ಎಂದರೆ ಆರು ತಿಂಗಳಿಗೊಮ್ಮೆ ನಡೆಯುತ್ತದೆ. ಆದರೆ, ಕೊರೊನಾ ಕೃಪೆಯಿಂದ ಪದವಿ ವಿದ್ಯಾರ್ಥಿಗಳಿಗೆ ತಿಂಗಳಿಗೊಮ್ಮೆ ಸೆಮಿಸ್ಟರ್ ಪರೀಕ್ಷೆ ಬರೆಯುವಂತಾಗಿದೆ. ಗುಲ್ಬರ್ಗ ವಿಶ್ವವಿದ್ಯಾಲಯವು ಕೊರೊನಾ ಬ್ಯಾಚ್ ಹೊರಗೆ ಕಳುಹಿಸಲು ಈ ರೀತಿ ತರಾತುರಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿದೆ. ಕೊರೊನಾದಿಂದ ಕಾಲೇಜುಗಳ ಮುಖ ನೋಡಲು ಆಗದೆ ವಿದ್ಯಾರ್ಥಿಗಳು ಪರದಾಡಿದ್ದರು. ಮತ್ತೂಂದೆಡೆ ಗುಲ್ಬರ್ಗ ವಿವಿ 40
ದಿನಗಳಲ್ಲೇ 2 ಸೆಮಿಸ್ಟರ್‌ಗಳ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿರುವುದು ಒಂದೆಡೆ ಖುಷಿ ಉಂಟು ಮಾಡಿದರೆ, ಮತ್ತೂಂದೆಡೆ ಆತಂಕಕ್ಕೆಡೆ ಮಾಡಿದೆ.
ಕಳೆದ ಆಗಸ್ಟ್‌ನಲ್ಲಿ 5ನೇ ಸೆಮಿಸ್ಟರ್ ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳು, ಕೇವಲ ತಿಂಗಳು ಕಳೆಯುವುದರೊಳಗೆ 6ನೇ ಸೆಮಿಸ್ಟರ್ ವೇಳಾ ಪಟ್ಟಿ ಕಂಡು ಕಂಗೆಟ್ಟಿದ್ದಾರೆ. ಇನ್ನೂ 5ನೇ ಸೆಮಿಸ್ಟರ್ ಫಲಿತಾಂಶ ಕೂಡ ಪ್ರಟಕವಾಗಿಲ್ಲ. ಅಲ್ಲದೇ, ಆರನೇ ಸೆಮಿಸ್ಟರ್‌ಗೆ ಸಂಬಂಧಿಸಿದ ಯಾವುದೇ ಪಠ್ಯವನ್ನು ಸರಿಯಾಗಿ ಓದಿಕೊಂಡಿಲ್ಲ. ಆಗಲೇ ಮತ್ತೂಂದು ಪರೀಕ್ಷೆ ಬರೆಯಬೇಕು ಎಂಬುದು ವಿದ್ಯಾರ್ಥಿಗಳಿಗೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ.
ಭಾಷಾವಾರು ವಿಷಯ ಕಡಿತ: ಈ ಬಾರಿ ಪರೀಕ್ಷೆಗೆ ಕೇವಲ ನಾಲ್ಕು ವಿಷಯಗಳು ಮಾತ್ರ ಇರಲಿದ್ದು, ಭಾಷಾವಾರು ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. 50 ಅಂಕಗಳ ಒಂದು ವಿಷಯ ಹಾಗೂ ಉಳಿದ ಮೂರು ಐಚ್ಛಿಕ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಅ.11ರಿಂದ ಪರೀಕ್ಷೆ ನಡೆಯಲಿವೆ.
ಸರ್ಕಾರ ಪದವಿ ಕಾಲೇಜುಗಳನ್ನು ಆಫ್‌ಲೈನ್ ಮೂಲಕ ನಡೆಸಲು ಅನುಮತಿ ನೀಡಿತ್ತು. ಇದರಿಂದ ಕನಿಷ್ಟ ಎರಡೂ¾ರು ತಿಂಗಳಾದರೂ ಕಾಲಾವಕಾಶ ಸಿಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಒಂದೇ ತಿಂಗಳಲ್ಲಿ ಪರೀಕ್ಷೆಯನ್ನು ಪ್ರಕಟಿಸಿದೆ. ಇದರಿಂದ ಕೆಲವೊಂದು ಪಠ್ಯ ಪೂರ್ಣಗೊಳಿಸಲು ಆಗಿಲ್ಲ. ಬಂದಷ್ಟು ಬರೆಯುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿಗಳು.
ಪರೀಕ್ಷಾ ಶುಲ್ಕ ಭರ್ತಿಗೂ ಗಡುವು: ಇನ್ನೂ ಪರೀಕ್ಷೆ ಶುಲ್ಕ ಭರ್ತಿಗೂ ಒಂದು ವಾರ ಕಾಲಾವಕಾಶ ನೀಡಿದ್ದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಏಕಕಾಲಕ್ಕೆ ವಿದ್ಯಾರ್ಥಿಗಳು ಶುಲ್ಕ ಭರ್ತಿಗೆ ಮುಂದಾಗಿದ್ದರಿಂದ ಸರ್ವರ್ ಸಮಸ್ಯೆ ಕಾಡಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಣ ಹೊಂದಿಸಿಕೊಂಡು ಶುಲ್ಕ ಪಾವತಿಸಲು ಕೊನೆ ದಿನ ಬಂದು ಬಿಟ್ಟಿತ್ತು. ಇಫೋನ್ ಪೇ, ಗೂಗಲ್ ಪೇನಂತ ಅಪ್ಲಿಕೇಶನ್ ಮೂಲಕವೂ ಪಾವತಿಸಲು ಅವಕಾಶ ಇತ್ತಾದರೂ ಸಾಕಷ್ಟು ವಿದ್ಯಾರ್ಥಿಗಳಿಗೆ ಆ ಸೌಲಭ್ಯ ಇಲ್ಲದ ಕಾರಣ ಕಂಪ್ಯೂಟರ್ ಕೇಂದ್ರಗಳಲ್ಲೇ ಹೋಗಿ ಕಟ್ಟುತ್ತಿದ್ದರು. ಆದರೆ, ಸರ್ವರ್ ಸಮಸ್ಯೆಯಿಂದ ಪರದಾಡುವಂತಾಗಿದ್ದು ಸುಳ್ಳಲ್ಲ.
ಬೇರೆ ವಿದ್ಯಾರ್ಥಿಗಳಿಗೆ ತೊಂದರೆ: ಈಗ ಪರೀಕ್ಷೆ ಘೋಷಣೆ ಮಾಡಿದ್ದು, ಬಿಎ, ಬಿಕಾಂ, ಬಿಎಸ್ಸಿ 6ನೇ ಸೆಮಿಸ್ಟರ್ ಪರೀಕ್ಷೆ ನಡೆಯಲಿದೆ. ಆದರೆ, ಈಚೆಗೆ 3, 5ನೇ ಸೆಮಿಸ್ಟರ್ ತಗರತಿ ನಡೆಸಲು ಸರ್ಕಾರ ಆದೇಶಿಸಿದೆ. ಈಗ ಪರೀಕ್ಷೆ ನಡೆಸಬೇಕಿರುವ ಕಾರಣ ಮತ್ತೆ ತರಗತಿಗಳನ್ನು ಸ್ಥಗಿತಗೊಳಿಸಿಯೇ ಪರೀಕ್ಷೆ ನಡೆಸಬೇಕಿದೆ. ಇದರಿಂದ ಮತ್ತೆ ಕಲಿಕೆಗೆ ಸಮಸ್ಯೆಯಾಗಲಿದೆ.
ಆದಷ್ಟು ಬೇಗನೇ 6ನೇ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಕೊನೆ ತಂಡವನ್ನು ಹೊರಗೆ ಕಳುಹಿಸುವ ದೃಷ್ಟಿಯಿಂದ ವಿವಿ ಈ ಕ್ರಮ ವಹಿಸಿದೆ. ವಿದ್ಯಾರ್ಥಿಗಳಿಗೆ ಒತ್ತಡ ಆಗಬಾರದು ಎಂದು ಕೇವಲ ಮೂರು ವಿಷಯಗಳ ಪರೀಕ್ಷೆ ಮಾತ್ರ ನಡೆಸಲಾಗುತ್ತಿದೆ. ಬಹುತೇಕ ಪಠ್ಯವನ್ನು ಪೂರ್ಣಗೊಳಿಸಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ.
ಆರ್.ಮಲ್ಲನಗೌಡ, ಪ್ರಾಚಾರ್ಯ,
ಸರ್ಕಾರಿ ಪದವಿ ಕಾಲೇಜ್, ರಾಯಚೂರು
ಸಿದ್ಧಯ್ಯಸ್ವಾಮಿ ಕುಕುನೂರು