ನವದೆಹಲಿ: ಇಬ್ಬರು ಶಾಲಾ ವಿದ್ಯಾರ್ಥಿಗಳು ಮನೆಗೆ ಹೋಗುವ ವೇಳೆ ರಸ್ತೆಯಲ್ಲಿಯೇ ಕಷ್ಟಕರವಾದ ಜಿಮ್ನಾಸ್ಟಿಕ್ಸ್ ಕಸರತ್ತನ್ನು ಲೀಲಾಜಾಲವಾಗಿ ಪ್ರದರ್ಶಿಸಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಷ್ಟೇ ಅಲ್ಲ ಈ ವಿಡಿಯೋ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಗಮನ ಕೂಡಾ ಸೆಳೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕಿರಣ್ ರಿಜಿಜು ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಹಲವಾರು ಸೂಕ್ಷ್ಮ ಹಾಗೂ ಕುತೂಹಲಕಾರಿ ಘಟನೆಗಳನ್ನು ಹಂಚಿಕೊಳ್ಳುತ್ತಾರೆ. ಅಷ್ಟೇ ಅಲ್ಲ ತಕ್ಷಣಕ್ಕೆ ಸ್ಪಂದಿಸುವುದು ಕೂಡಾ ರಿಜಿಜು ಅವರ ಕಾರ್ಯವೈಖರಿಯಾಗಿದೆ.
ಇತ್ತೀಚೆಗೆ ಇಬ್ಬರು ಶಾಲಾ ವಿದ್ಯಾರ್ಥಿಗಳ ಜಿಮ್ನಾಸ್ಟಿಕ್ ಕಸರತ್ತಿನ ವಿಡಿಯೋವನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದು, ಅದಕ್ಕೆ ಒಲಿಂಪಿಕ್ ನಲ್ಲಿ ಐದು ಬಾರಿ ಚಿನ್ನದ ಪದಕ ಗೆದ್ದಿದ್ದ ರೊಮೆನಿಯಾದ ನಾಡಿಯಾ ಕೊಮಾನೆಸಿ ಕೂಡಾ ಟ್ವೀಟ್ ಮಾಡಿದ್ದು, ಇದಕ್ಕೆ ರಿಜಿಜು ಅಭಿನಂದನೆ ಸಲ್ಲಿಸಿದ್ದಾರೆ.
ಟಿಕ್ ಟಾಕ್ ವಿಡಿಯೋ ಟ್ವೀಟರ್ ನಲ್ಲಿ 5 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಒಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ರಸ್ತೆಯಲ್ಲಿಯೇ ಜಿಮ್ನಾಸ್ಟಿಕ್ ಕಸರತ್ತು ನಡೆಸುವ ವಿಡಿಯೋ ಇದಾಗಿದೆ. ಇದೊಂದು ಅದ್ಭುತ ಎಂದು ನಾಡಿಯಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಆದರೆ ಈ ಮಕ್ಕಳ ವಿಡಿಯೋವನ್ನು ಎಲ್ಲಿ ಚಿತ್ರೀಕರಿಸಲಾಗಿದೆ, ಯಾವ ಪ್ರದೇಶದವರು ಎಂಬ ಮಾಹಿತಿ ಲಭ್ಯವಾಗಿಲ್ಲ. ಏತನ್ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕಿದವರು ಇದು ನಾಗಲ್ಯಾಂಡ್ ಇದ್ದಿರಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.