ದಿಸ್ಪುರ್ : ಅಸ್ಸಾಂ ನ ಪ್ರಮುಖ ಬುರಾಚಪೋರಿ ಮತ್ತು ಲೌಖೋವಾ ವನ್ಯಜೀವಿ ಅಭಯಾರಣ್ಯಗಳಲ್ಲಿ ಘೇಂಡಾಮೃಗಗಳು ಮತ್ತೊಮ್ಮೆ ಕಾಣಿಸಿಕೊಂಡಿರುವುದು ಸುದ್ದಿಯಾಗಿದೆ. ಎರಡೂ ವನ್ಯಜೀವಿ ಅಭಯಾರಣ್ಯಗಳು ಅತಿಕ್ರಮಣ ವಿರೋಧಿ ಕಾರ್ಯಾಚರಣೆಗಳಿಗೆ ಸಾಕ್ಷಿಯಾಗಿದ್ದವು, ಇತ್ತೀಚೆಗೆ ಈ ಪ್ರದೇಶಗಳಲ್ಲಿ ಎರಡು ಘೇಂಡಾಮೃಗಗಳ ಚಿತ್ರಗಳನ್ನು ಸೆರೆಹಿಡಿಯಲಾಗಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಎಕ್ಸ್ ಪೋಸ್ಟ್ ನಲ್ಲಿ ”ಎರಡು ವನ್ಯಜೀವಿ ಅಭಯಾರಣ್ಯಗಳಲ್ಲಿ ನಡೆಸಿದ ಅತಿಕ್ರಮಣ ವಿರೋಧಿ ಅಭಿಯಾನದ ಒಂದು ವರ್ಷದೊಳಗೆ ಬುರಾಚಪೋರಿ ಮತ್ತು ಲೌಖೋವಾಕ್ಕೆ ಘೇಂಡಾಮೃಗಗಳು ಹಿಂತಿರುಗಿವೆ” ಎಂಬ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
“40 ವರ್ಷಗಳ ನಂತರ ನಮ್ಮ ಪ್ರತಿಷ್ಠಿತ ಘೇಂಡಾಮೃಗಗಳು ಬುರಾಚಪೋರಿ ಮತ್ತು ಲೌಖೋವಾಗೆ ಹಿಂದಿರುಗಿವೆ ಎಂದು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಆ ಪ್ರದೇಶದಲ್ಲಿನ ನಮ್ಮ ಯಶಸ್ವಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯ 1 ವರ್ಷದೊಳಗೆ ಇವುಗಳು ಹಿಂತಿರುಗಿವೆ. 51.7 ಚದರ ಕಿ.ಮೀ ಅರಣ್ಯ ಪ್ರದೇಶವನ್ನು 2023 ರಲ್ಲಿ ಅತಿಕ್ರಮಣಕಾರರಿಂದ ಹಿಂಪಡೆಯಲಾಗಿದೆ,” ಎಂದು ಅಸ್ಸಾಂ ಸಿಎಂ ವಿವರ ನೀಡಿದ್ದಾರೆ.
ಈ ಎರಡು ಪ್ರಮುಖ ವನ್ಯಜೀವಿ ಅಭಯಾರಣ್ಯಗಳಿಂದ ಘೇಂಡಾಮೃಗಗಳು ನಾಪತ್ತೆಯಾಗುತ್ತಿದ್ದುದು ಕಳವಳಕಾರಿ ಬೆಳವಣಿಗೆಯಾಗಿತ್ತು. ಗಂಭೀರವಾಗಿ ಪರಿಗಣಿಸಿದ ಸರಕಾರ ಅತಿಕ್ರಮಣ ವಿರೋಧಿ ಕಾರ್ಯಾಚರಣೆಗಿಳಿದಿತ್ತು. ಹಿಮಂತ ಬಿಸ್ವಾ ಶರ್ಮ ನೇತೃತ್ವದ ಸರಕಾರ ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಬೃಹತ್ ಅತಿಕ್ರಮಣ ವಿರೋಧಿ ಆಂದೋಲನವನ್ನು ಕೈಗೊಳ್ಳಲು ಆರಂಭಿಸಿತು.