ಕೋಲ್ಕತ : ಸರ್ವೋಚ್ಚ ನ್ಯಾಯಾಲಯದ ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ನಿನ್ನೆ ಬಂಡೆದಿದ್ದ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಪೈಕಿ ಇಬ್ಬರು “ನ್ಯಾಯಾಂಗದಲ್ಲಿ ಯಾವುದೇ ಬಿಕ್ಕಟ್ಟಿಲ್ಲ; ಬಂಡಾಯವೂ ಇಲ್ಲ’ ಎಂದು ಇಂದು ಶನಿವಾರ ಹೇಳಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಕಾರ್ಯ ನಿರ್ವಹಣೆ, ಕೇಸು ಹಂಚಿಕೆಯಲ್ಲಿನ ತಾರತಮ್ಯವನ್ನು ನಿನ್ನೆ ಮಾಧ್ಯಮದ ಮುಂದೆ ತೀವ್ರವಾಗಿ ಟೀಕಿಸಿದ್ದ ನಾಲ್ವರು ಹಿರಿಯ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ನ್ಯಾ. ರಂಜನ್ ಗೊಗೋಯಿ ಅವರು ಇಂದು “ನ್ಯಾಯಾಂಗದಲ್ಲಿ ಯಾವುದೇ ಬಿಕ್ಕಟ್ಟಿಲ್ಲ’ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರ ಪಾರ್ಶ್ವದಲ್ಲಿಂದು ಮಾತನಾಡುತ್ತಿದ್ದ ನ್ಯಾ. ಗೊಗೋಯಿ “ಯಾವುದೇ ಬಿಕ್ಕಟ್ಟಿಲ್ಲ’ ಎಂದು ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ.
ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಕೃತ್ಯ ಶಿಸ್ತನ್ನು ಉಲ್ಲಂಘನೆ ಮಾಡಿದಂತಾಗಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಗೊಗೋಯಿ ಯಾವುದೇ ಪ್ರತಿಕ್ರಿಯೆ ನೀಡದೆ, “ನನಗೀಗ ಲಕ್ನೋ ವಿಮಾನವನ್ನು ಹಿಡಿಯುವುದಿದೆ; ನಾನೀಗ ಏನನ್ನೂ ಹೇಳಲಾರೆ’ ಎಂದರು.
ನಾಲ್ವರು ಬಂಡುಕೋರ ನ್ಯಾಯಮೂರ್ತಿಗಳಲ್ಲಿ ಇನ್ನೊಬ್ಬರಾದ ನ್ಯಾ.ಕುರಿಯನ್ ಜೋಸೆಫ್ ಇಂದು ಶನಿವಾರ ಮಾಧ್ಯಮದೊಂದಿಗೆ ಮಾತನಾಡುತ್ತಾ, “ಸರ್ವೋಚ್ಚ ನ್ಯಾಯಾಲಯದಲ್ಲಿ ಯಾವುದೇ ಸಾಂವಿಧಾನಿಕ ಬಿಕ್ಕಟ್ಟಿಲ್ಲ; ಕೇವಲ ನಿಯಮಾನುಸರಣೆಯಲ್ಲಿನ ತೊಂದರೆಗಳನ್ನು ಮಾತ್ರವೇ ನಾವು ಆಕ್ಷೇಪಿಸಿದ್ದೇವೆ’ ಎಂದು ಹೇಳಿದರು.
ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಎರಡು ತಿಂಗಳ ಹಿಂದೆಯೇ ನಾವು ಒಪ್ಪಿಸಿದ ಪತ್ರವನ್ನು ನಿನ್ನೆ ನಾವು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ನಾವು ಹೇಳಬೇಕಾದ ಎಲ್ಲ ವಿಷಯಗಳು ಅದರಲ್ಲಿವೆ’ ಎಂದು ನ್ಯಾ. ಕುರಿಯನ್ ಹೇಳಿದರು.
ಭಾರತದ ಬಾರ್ ಕೌನ್ಸಿಲ್, ಸರ್ವೋಚ್ಚ ನ್ಯಾಯಾಲಯದಲ್ಲಿನ ಬಿಕ್ಕಟ್ಟನ್ನು ದುರದೃಷ್ಟಕರ ಎಂದು ಹೇಳಿದೆ.