ಬೆಂಗಳೂರು: ಕೆ.ಜಿ.ಹಳ್ಳಿ ಹಾಗೂ ವೈಟ್ಫೀಲ್ಡ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ಕಾರು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಗಾವರದ ಪೂರ್ಣಿಮಾ (35) ಮೃತ ಮಹಿಳೆ. ಈ ಸಂಬಂಧ ನೇಪಾಳ ಮೂಲದ ಕಾರು ಚಾಲಕಿ ಪೂನಂಳನ್ನು (30) ಬಂಧಿಸಲಾಗಿದೆ. ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಪೂರ್ಣಿಮಾ ತಮ್ಮ ಮಗನ ಜತೆ ಕೆ.ಜಿ. ಹಳ್ಳಿಯ ಅಂಬೇಡ್ಕರ್ ಆಟದ ಮೈದಾನ ರಸ್ತೆ ಕಡೆಯಿಂದ ನಾಗಾವಾರ ಕಡೆ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಮಾರುತಿ ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದ ಪೂನಂ, ಪೂರ್ಣಿಮಾಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಪೂರ್ಣಿಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ಕೆ.ಜಿ.ಹಳ್ಳಿ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.
ಬೈಕ್ ಸವಾರ ಸಾವು: ಮತ್ತೂಂದು ಪ್ರಕರಣದಲ್ಲಿ ವೈಟ್ಫೀಲ್ಡ್ ಸಂಚಾರ ಠಾಣೆ ವ್ಯಾಪ್ತಿಯ ವರ್ತೂರು ಮುಖ್ಯ ರಸ್ತೆಯ ತುಬರಹಳ್ಳಿ ಜಂಕ್ಷನ್ ಬಳಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥ್ ಮೃತಪಟ್ಟಿದ್ದು, ಹಿಂಬದಿ ಸವಾರ ವಿಷ್ಣುಪ್ರಸಾದ್ ಗಾಯಗೊಂಡಿದ್ದಾರೆ. ಈ ಸಂಬಂಧ ಕಾರು ಚಾಲಕ ವಿಜಯ್ ಕುಮಾರ್ರನ್ನು ಬಂಧಿಸಲಾಗಿದೆ.
ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ವರ್ತೂರು ಕೊಡಿಯಿಂದ ಕುಂದಹಳ್ಳಿ ಗೇಟ್ ಕಡೆ ವೇಗವಾಗಿ ವಿಜಯ್ ಕುಮಾರ್ ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದು, ಹಿಂಬದಿಯಿಂದ ಮಂಜುನಾಥ್ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಚಾಲಕ ಮಂಜುನಾಥ್ ಹಾಗೂ ಹಿಂಬದಿ ಸವಾರ ವಿಷ್ಣಪ್ರಸಾದ್ ಕೆಳಗೆ ಬಿದ್ದಿದ್ದಾರೆ.
ಈ ವೇಳೆ ಮಂಜುನಾಥ್ ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಪರಿಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.