ರಾಮನಗರ: ಲೈಕ್ ನೀಡಿ ಹಣ ಸಂಪಾದಿಸಿ ಎಂದು ಹೇಳಿದ ಆನ್‌ಲೈನ್ ಆ್ಯಪ್ ನಂಬಿ ಚನ್ನಪಟ್ಟಣದ ಇಬ್ಬರು 13.97 ಲಕ್ಷ ರೂ. ಕಳೆದುಕೊಂಡಿರುವ ಪ್ರಸಂಗ ಇದೀಗ ಸಿಇಎನ್ ಠಾಣೆ ಮೆಟ್ಟಿಲೇರಿದೆ.
ಇಂಡಿಯನ್ ಸಿಆರ್‌ಡಬ್ಲ್ಯುಡಿ ಡಾಟ್ ಕಾಂ. ಎಂಬ ಆನ್‌ಲೈನ್ ಅಪ್ಲಿಕೇಷನ್‌ನಿಂದ ಹಣ ಕಳೆದುಕೊಂಡಿರುವ ಬಗ್ಗೆ ಚನ್ನಪಟ್ಟಣ ನಗರದ ಶಾಂತಪ್ಪ ಬ್ಲಾಕ್ ನಿವಾಸಿ ಮಹದೇವ, ಚನ್ನಪಟ್ಟಣ ತಾಲೂಕಿನ ಹೊನ್ನಾಯ್ಕನಹಳ್ಳಿ ಗ್ರಾಮದ ಮೋಹನ್ ಎಂಬವರು ಪ್ರತ್ಯೇಕ ದೂರು ದಾಖಲಿಸಿದ್ದಾರೆ.
9.21 ಲಕ್ಷ ರೂ.ದೋಖಾ: ಚನ್ನಪಟ್ಟಣ ನಗರದ ಶಾಂತಪ್ಪ ಬ್ಲಾಕ್ ನಿವಾಸಿ ಆಗಿರುವ ಮಹದೇವ್ ಎಂಬವರು ಹೋಟೆಲ್ ಕೆಲಸ ಮಾಡುತ್ತಿದ್ದು, ಇವರಿಗೆ ಮೊಬೈಲ್‌ನಲ್ಲಿ ಬಂದ ಮೆಸೇಜ್ ನೋಡಿ ಆನ್‌ಲೈನ್‌ನಲ್ಲಿ ಹಣ ಗಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮೊದಲು ಇವರಿಗೆ ಕೆಲ ಯೂಟ್ಯೂಬ್ ವಿಡಿಯೋಗಳಿಗೆ ಲೈಕ್ ಮಾಡುವಂತೆ ತಿಳಿಸಿದ್ದಾರೆ.
ಮೊದಲು ವಿಡಿಯೋ ಒಂದಕ್ಕೆ 45 ರೂ.ನಂತೆ ವಾರಕ್ಕೆ 20 ವಿಡಿಯೋ ಲೈಕ್ ಮಾಡಲು ಹೇಳಿ 900 ರೂ. ಹಣವನ್ನು ಇವರ ಬ್ಯಾಂಕ್ ಖಾತೆಗೆ ವಂಚಕರು ಜಮೆ ಮಾಡಿದ್ದಾರೆ. ಹೀಗೆ ಒಂದು ತಿಂಗಳು ಜಮೆ ಮಾಡಿದ ಬಳಿಕ, ನೀವು ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ಹಂತ ಹಂತವಾಗಿ 9.21 ಲಕ್ಷ ರೂ. ಹಣವನ್ನು ವಂಚಕರು ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ.
ಬ್ಯಾಂಕ್ ಉದ್ಯೋಗಿಗೆ 4.76 ಲಕ್ಷ ರೂ.ವಂಚನೆ: ಮತ್ತೂಂದು ಪ್ರಕರಣದಲ್ಲಿ ಇದೇ ಆ್ಯಪ್ ಮೂಲಕ ಬೆಂಗಳೂರಿನ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುವ ಚನ್ನಪಟ್ಟಣ ತಾಲೂಕಿನ ಹೊನ್ನಾಯಕನಹಳ್ಳಿ ಗ್ರಾಮದ ಮೋಹನ್ ಎಂಬ ವ್ಯಕ್ತಿಗೆ ವಿಡಿಯೋಗೆ ಲೈಕ್ ಮಾಡುವಂತೆ ಹೇಳಿ ಮೊದಲು 3 ತಿಂಗಳು ನೀಡಿ, ಬಳಿಕ ಹೂಡಿಕೆ ಮಾಡುವಂತೆ ನಂಬಿಸಿ 4.76 ಲಕ್ಷ ರೂ. ಹಣವನ್ನು ಹಂತ ಹಂತವಾಗಿ ಹಾಕಿಸಿಕೊಂಡು ವಂಚಿಸಲಾಗಿದೆ. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಜಿಲ್ಲಾ ಸಿಇಎನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.