ತೀರ್ಥಹಳ್ಳಿ: ಅರಣ್ಯ ಅಧಿಕಾರಿಗಳ ಕೆಲಸಕ್ಕೆ ಅಡ್ಡಬಂದು, ಅವರನ್ನ ತಳ್ಳಾಡಿ ನೂಕಾಡಿದ ಪ್ರಕರಣ ಸಂಬಂಧ ಕೋರ್ಟ್ ವೊಂದು ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಆರೋಪಿಗಳಿಗೆ 3 ವರ್ಷ ಶಿಕ್ಷೆ ವಿಧಿಸಿದೆ.
ಪ್ರಕರಣದ ಹಿನ್ನಲೆ ಏನು?
ದಿನಾಂಕ: 28/01/2021 ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಆಲಗೇರಿ ಗ್ರಾಮದಲ್ಲಿ ಭದ್ರಪ್ಪ ಮತ್ತು ರಕ್ಷಿತ್ ಅರಣ್ಯ ಜಾಗವನ್ನು ಒತ್ತುವರಿ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಈ ಮಾಹಿತಿ ಮೇರೆಗೆ ಆಗುಂಬೆ ವಲಯದ ಉಪವಲಯ ಅರಣ್ಯಾಧಿಕಾರಿಯಾದ ಕಿರಣ ಕುಮಾರ್ ಮತ್ತು ಅರಣ್ಯ ರಕ್ಷಕರಾದ ಅಭಿಷೇಕ್ ಕಾವಡಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಅವರನ್ನು ಭದ್ರಪ್ಪ ಮತ್ತು ರಕ್ಷಿತ್ ಅವಾಚ್ಯ ಶಬ್ದಗಳಿಂದ ಬೈದು ದೂಡಿ ಬೀಳಿಸಿದ್ದರು ಎಂದು ದೂರಲಾಗಿತ್ತು.
ಈ ಸಂಬಂಧ ಐಪಿಸಿ 341, 504, 332, 353 ಸಹಿತ 34 ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಪ್ರಕರಣದ ಸಂಬಂಧ ಅಂದಿನ ಆಗುಂಬೆ ಪಿಎಸ್ ಐ ಶಿವಕುಮಾರ್ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೋರ್ಟ್‌ನಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೇಮಲೀಲಾ ವಾದ ಮಂಡಿಸಿದ್ದರು. ಇದೀಗ ಹಿರಿಯ ವ್ಯವಹಾರ ಮತ್ತು ಜೆಎಂ ಎಫ್ ಸಿ ನ್ಯಾಯಾಲಯ ತೀರ್ಥಹಳ್ಳಿ ಪ್ರಕರಣದ ತೀರ್ಪು ನೀಡಿದೆ.
ಆರೋಪಿತರಾದ ಭದ್ರಪ್ಪ 57 ವರ್ಷ, ರಕ್ಷಿತ್, 30 ವರ್ಷ, ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತರಿಗೆ 3 ವರ್ಷ ಕಠಿಣ ಕಾರಾಗೃಹವಾಸ ಶಿಕ್ಷೆ, ರೂ 19,000/ ದಂಡ, ದಂಡಕಟ್ಟಲು ವಿಫಲರಾದಲ್ಲಿ 01 ವರ್ಷ ಸಾದಾ ಕಾರಾಗೃಹವಾಸ ಶಿಕ್ಷೆ ವಿಧಿಸಿದೆ.