ದುಬೈ: ಐಸಿಸಿ ಟಿ20 ವಿಶ್ವಕಪ್ ನಲ್ಲಿ ಅಜೇಯ ಪ್ರದರ್ಶನ ನೀಡಿ ಸೆಮಿ ಫೈನಲ್ ಗೆ ಎಂಟ್ರಿಯಾಗಿರುವ ಪಾಕಿಸ್ಥಾನ ತಂಡ ಇಂದು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇಂದು ರಾತ್ರಿ ನಡೆಯಲಿರುವ ದ್ವಿತೀಯ ಸೆಮಿ ಫೈನಲ್ಲಿ ಬಾಬರ್ ಮತ್ತು ಫಿಂಚ್ ಪಡೆಗಳು ಮುಖಾಮುಖಿಯಾಗುತ್ತಿದೆ.
ಮಹತ್ವದ ಸೆಮಿ ಪಂದ್ಯಕ್ಕೂ ಮುನ್ನ ಪಾಕಿಸ್ಥಾನ ತಂಡಕ್ಕೆ ಆಘಾತ ಎದುರಾಗಿದೆ. ಇನ್ ಫಾರ್ಮ್ ಆಟಗಾರರಾದ ಆರಂಭಿಕ ಮೊಹಮ್ಮದ್ ರಿಜ್ವಾನ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಶೋಯೆಬ್ ಮಲಿಕ್ ಜ್ವರದಿಂದ ಬಳಲುತ್ತಿದ್ದಾರೆ. ಅವರಿಬ್ಬರೂ ಗುರುವಾರ ದುಬೈನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನೂ ಓದಿ:ಪತ್ನಿ ಚಿತೆ ಉರಿಯುವಾಗಲೇ ಪದ್ಮಶ್ರೀ ಸ್ವೀಕಾರ
ಪಾಕಿಸ್ತಾನದ ಜಿಯೋ ನ್ಯೂಸ್ ವರದಿಯ ಪ್ರಕಾರ, ಜ್ವರದಿಂದಾಗಿ ಮಲಿಕ್ ಮತ್ತು ರಿಜ್ವಾನ್ ಸೆಮಿಫೈನಲ್ ಮುನ್ನಾದಿನದಂದು ಅಭ್ಯಾಸಕ್ಕೆ ಬರಲಿಲ್ಲ. ಅವರಿಬ್ಬರಿಗೂ ಕೋವಿಡ್-19 ನೆಗೆಟಿವ್ ಬಂದಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಗುರುವಾರ ಬೆಳಿಗ್ಗೆ ವೈದ್ಯಕೀಯ ತಪಾಸಣೆಯ ನಂತರ ಅವರು ತಂಡದಲ್ಲಿ ಆಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.
ಪಾಕ್ ತಂಡ ಸೂಪರ್ 12 ಹಂತದ ಎಲ್ಲಾ ಐದು ಪಂದ್ಯಗಳನ್ನು ಗೆದ್ದು ಸೆಮಿ ಪ್ರವೇಶ ಪಡೆದಿದೆ. ಆಡಿದ ಎಲ್ಲಾ ಪಂದ್ಯಗಳಲ್ಲೂ ಒಂದೇ ಆಡುವ ಬಳಗವನ್ನು ಉಳಿಸಿಕೊಂಡಿರುವುದು ಬಾಬರ್ ಹೆಚ್ಚುಗಾರಿಕೆ. ಆದರೆ ಸೆಮಿ ಫೈನಲ್ ನಲ್ಲಿ ಬದಲಾವಣೆ ಅನಿವಾರ್ಯವಾಗಬಹುದು.