Advertisement

ಎಸಿಸಿ ಸಿಮೆಂಟ್‌ನ ಎರಡು ಹಳೆ ಘಟಕ ತೆರವು

10:10 AM Nov 06, 2021 | Team Udayavani |

ವಾಡಿ:ಸಿಮೆಂಟ್‌ ಉತ್ಪಾದನೆ ಮೂಲಕ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿರುವ ಚಿತ್ತಾಪುರ ತಾಲೂಕಿನ ವಾಡಿ ನಗರದ ಎಸಿಸಿ ಸಿಮೆಂಟ್‌ ಕಾರ್ಖಾನೆಯ ಎರಡು ಸಿಮೆಂಟ್‌ ಉತ್ಪಾದನಾ ಘಟಕಗಳ ತೆರವು ಕಾರ್ಯಾಚರಣೆಗೆ ಕಂಪನಿ ಆಡಳಿತ ಚಾಲನೆ ನೀಡಿದೆ.

Advertisement

ಐದು ದಶಕಗಳ ಕಾಲ ಸಾವಿರಾರು ಸ್ಥಳೀಯರಿಗೆ ಉದ್ಯೋಗ ನೀಡಿ ಬದುಕು ಕಟ್ಟಿಕೊಟ್ಟಿದ್ದ ಎಸಿಸಿ ಎರಡು ಘಟಕಗಳು ಈಗ ಹಳೆಯದಾಗಿವೆ ಎನ್ನುವ ಕಾರಣಕ್ಕೆ ಧರೆಗುರುಳುತ್ತಿವೆ.

1968ರಲ್ಲಿ ಹುಟ್ಟಿದ ಈ ಕಂಪನಿಯಲ್ಲಿ ಆರಂಭದ ದಿನಗಳಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದರು. ಕಂಪನಿ ಆಡಳಿತ ಮಂಡಳಿ ಕಾಲಕ್ಕೆ ತಕ್ಕಂತೆ ಬದಲಾಗಲು ಶುರು ಮಾಡಿದ್ದರಿಂದ ಶ್ರಮಾಧಾರಿತ ಉತ್ಪಾದನೆಯಿಂದ ವಿಮುಖವಾಗಿ ಯಂತ್ರೋಪಕರಣಗಳು ಬಂದವು. ನಂತರ ಸ್ವಯಂ ನಿವೃತ್ತಿ ಹಾಗೂ ವಯೋ ನಿವೃತ್ತಿಯಿಂದಾಗಿ ದಿನೇ ದಿನೆ ಕಾರ್ಮಿಕರ ಸಂಖ್ಯೆ ಕ್ಷೀಣಿಸಲು ಆರಂಭವಾಯಿತು. ಸದ್ಯ ಬೆರಳೆಣಿಕೆಯಷ್ಟು ಕಾರ್ಮಿಕರು ಮಾತ್ರ ಎಸಿಸಿಯಲ್ಲಿ ದುಡಿಯುತ್ತಿದ್ದು, ಕೇವಲ ಎಂಜಿನಿಯರ್‌ಗಳ ನೇಮಕಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತಿದೆ.

ಪ್ರತಿದಿನ 12,500 ಟನ್‌ ಸಿಮೆಂಟ್‌ ಉತ್ಪಾದಿಸುವ ಎಸಿಸಿ ಕಂಪನಿ, ಸ್ಥಳೀಯವಾಗಿ ಒಟ್ಟು ನಾಲ್ಕು ಉತ್ಪಾದನಾ ಘಟಕಗಳನ್ನು ಹೊಂದಿದೆ. ಇದರ ವಾರ್ಷಿಕ ಆದಾಯ ಸುಮಾರು ಹತ್ತು ಸಾವಿರ ಕೋಟಿ ರೂ. ಇದರಲ್ಲಿ ಈಗ ಎರಡು ಘಟಕಗಳನ್ನು ಸಂಪೂರ್ಣ ನೆಲಸಮ ಮಾಡಲು ಕಂಪನಿ ಆಡಳಿತ ಮುಂದಾಗಿದೆ.

ಘಟಕ ತೆರವು ಮಾಡಿದ ಬಳಿಕ ಉಳಿದ ಅವಶೇಷಗಳನ್ನು ಮತ್ತೊಂದು ಕಂಪನಿಗೆ ಮಾರಾಟ ಮಾಡಲಾಗಿದೆ. ಲಾರಿಗಳು ಕಬ್ಬಿಣದ ಅವಶೇಷ-ತ್ಯಾಜ್ಯಗಳನ್ನು ತುಂಬಿಕೊಂಡು ಸಾಗುತ್ತಿವೆ. ಸಿಮೆಂಟ್‌ ಉತ್ಪಾದಿಸುತ್ತಿದ್ದ ವೇಳೆಯೇ ಇಡೀ ಘಟಕವನ್ನು ತೆರವುಗೊಳಿಸಲು ಮುಂದಾಗಿರುವ ಕಂಪನಿ ನಿರ್ಧಾರದಿಂದ ಕಾರ್ಮಿಕರು ಆತಂಕಕ್ಕೆ ಈಡಾಗಿದ್ದಾರೆ.

Advertisement

ಇದನ್ನೂ ಓದಿ:ಕಳವು ಯತ್ನ: ಆರೋಪಿಗಳು ಪರಾರಿ

ಇನ್ನುಳಿದ ಎರಡು ಘಟಕಗಳಲ್ಲಿ ಕಾರ್ಮಿಕರ ಹೊಸ ನೇಮಕಾತಿ ಶಾಶ್ವತವಾಗಿ ಕೈಬಿಡಲಾಗಿದ್ದು, ಕೇವಲ ಕೆಲವೇ ಗುತ್ತಿಗೆ ಕಾರ್ಮಿಕರು ದುಡಿಯುತ್ತಿದ್ದಾರೆ. ಯಂತ್ರಾಧಾರಿತ ಉತ್ಪಾದನೆಗೆ ಆದ್ಯತೆ ನೀಡಿದ್ದರಿಂದ ಇನ್ಮುಂದೆ ಕಂಪನಿಯ ಕಾಯಂ ಉದ್ಯೋಗ ಗಗನಕುಸುಮವಾಗಲಿದೆ. 2021ರ ಡಿಸೆಂಬರ್‌ ಅಂತ್ಯದವರೆಗೆ ಎಸಿಸಿಯ ಎರಡು ಘಟಕಗಳು ಇತಿಹಾಸದ ಪುಟ ಸೇರಲಿವೆ.

ಎರಡು ಉತ್ಪಾದನಾ ಘಟಕಗಳನ್ನು ತೆರವುಗೊಳಿಸಿ ಕೇವಲ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಕಾಯಂ ಕಾರ್ಮಿಕರ ಸಂಖ್ಯೆ ಇಳಿಕೆ ಮಾಡುವುದರ ಹಿಂದೆ ಎಸಿಸಿಯಲ್ಲಿ ಕಾರ್ಮಿಕ ಸಂಘವನ್ನು ಬೇರು ಸಮೇತ ಕಿತ್ತೆಸೆಯುವ ಹುನ್ನಾರ ಅಡಗಿದೆ. ಶ್ರಮಾಧಾರಿತ ಉತ್ಪಾದನೆ ಕೈಬಿಟ್ಟು ಯಂತ್ರಗಳಿಗೆ ಮೊರೆ ಹೋದರೆ ಕಂಪನಿ ಮೇಲೆ ಅವಲಂಬಿತವಾಗಿ ಬದುಕುತ್ತಿರುವ ಸಾವಿರಾರು ಕುಟುಂಬಗಳು ಬೀದಿಗೆ ಬರಲಿವೆ. -ಶ್ರವಣಕುಮಾರ ಮೊಸಲಗಿ, ವಕೀಲ, ಹೋರಾಟಗಾರ

-ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next