Advertisement

ಸುವರ್ಣದಲ್ಲಿ ಎರಡು ಹೊಸ ಧಾರಾವಾಹಿ

10:43 AM Dec 03, 2017 | |



Advertisement

ಸುವರ್ಣ ವಾಹಿನಿಯಲ್ಲಿ ಎರಡು ಹೊಸ ಧಾರಾವಾಹಿಗಳು ಆರಂಭವಾಗುತ್ತಿವೆ. “ಜಾನಕಿ ರಾಘವ’ ಹಾಗೂ “ಪುಟ್ಮಲ್ಲಿ’. ಡಿಸೆಂಬರ್‌ 4 ರಿಂದ “ಜಾನಕಿ ರಾಘವ’ ರಾತ್ರಿ 9.30ಕ್ಕೆ ಪ್ರಸಾರ ಕಂಡರೆ, “ಪುಟ್ಮಲ್ಲಿ’ ಡಿಸೆಂಬರ್‌ ಸಂಜೆ 6.30ಕ್ಕೆ ಪ್ರಸಾರ ಕಾಣಲಿದೆ. ವಿನು ಬಳಂಜ “ಜಾನಕಿ ರಾಘವ’ ಧಾರಾವಾಹಿಯ ನಿರ್ದೇಶಕರು. ಇದು ಭಕ್ತಿ ಹಾಗೂ ಪ್ರೀತಿಯ ಕಥೆಯಂತೆ.

ಎರಡು ಕುಟುಂಬಗಳ ಕಲಹಕೆ ಬೇರೆಯಾದ ರಾಮನ ಮೂರ್ತಿಯನ್ನು ಒಂದು ಮಾಡಲು ಹೊರಟ ಜಾನಕಿ ಹಾಗೂ ರಾಘವರು ಮುಂದೆ ಹೇಗೆ ಪ್ರೀತಿಯಲ್ಲಿ ಬೀಳುತ್ತಾರೆ ಎಂಬ ಅಂಶವೂ ಈ ಧಾರಾವಾಹಿಯಲ್ಲಿ ಪ್ರಮುಖವಾಗಿದೆಯಂತೆ. ಧಾರಾವಾಹಿ ಒಂದು ಊರಿನ ಆಚಾರ-ವಿಚಾರ, ನಂಬಿಕೆ, ಪರ-ವಿರೋಧಗಳ ಸುತ್ತ ಸಾಗುತ್ತದೆಯಂತೆ. ಮೂಡಿಗೆರೆ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣವಾಗಲಿದೆ.

ಈ ಧಾರವಾಹಿಯಲ್ಲಿ ಪವನ್‌ ಹಾಗೂ ಜೀವಿತಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇಬ್ಬರಿಗೂ ಇದು ಮೊದಲ ಧಾರಾವಾಹಿ. ಉಳಿದಂತೆ ಸುಂದರಶ್ರೀ, ರವಿಭಟ್‌, ಗುರು ಹೆಗ್ಗಡೆ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈ ಧಾರಾವಾಹಿ ಮೂಲಕ ಪದ್ಮಜಾ ರಾವ್‌ ಮತ್ತೆ ಕಿರುತೆರೆಗೆ ವಾಪಾಸ್‌ ಬರುತ್ತಿದ್ದಾರೆ. ಸುಮಾರು ಏಳು ವರ್ಷಗಳಿಂದ ಕಿರುತೆರೆಯಿಂದ ದೂರವಿದ್ದು, ಸಿನಿಮಾಗಳಲ್ಲಿ ಬಿಝಿಯಾಗಿದ್ದ ಪದ್ಮಜಾ ರಾವ್‌ಗೆ ಕಿರುತೆರೆಗೆ ಬರಬೇಕೆಂಬ ಆಸೆ ಇತ್ತಂತೆ.

ಆದರೆ, ಒಳ್ಳೆಯ ಪಾತ್ರ ಹಾಗೂ ತಂಡಕ್ಕಾಗಿ ಕಾಯುತ್ತಿದ್ದರಂತೆ. ಅದು “ಜಾನಕಿ ರಾಘವ’ ಮೂಲಕ ಸಿಕ್ಕಿದೆ ಎನ್ನುವುದು ಅವರ ಮಾತು. ಧಾರಾವಾಹಿಯ ಶೀರ್ಷಿಕೆ ಗೀತೆಗೆ ಗುರುಕಿರಣ್‌ ಸಂಗೀತ ನೀಡಿದ್ದಾರೆ. ರವಿಕುಮಾರ್‌ ಛಾಯಾಗ್ರಹಣ, ನವೀನ್‌ ಸಾಗರ್‌ ಸಂಭಾಷಣೆ ಧಾರಾವಾಹಿಗಿದೆ. ಲಿಂಗೇಗೌಡ ಹಾಗೂ ಸುಭಾಷ್‌ ಗೌಡ ಈ ಧಾರಾವಾಹಿಯ ನಿರ್ಮಾಪಕರು.

Advertisement

ಇನ್ನು, “ಪುಟ್ಮಲ್ಲಿ’ ಧಾರಾವಾಹಿ ಅನಾಥ ಹೆಣ್ಮುಮಗಳ ಕಥೆಯೊಂದಿಗೆ ಆರಂಭವಾಗುತ್ತದೆ. ಈ ಧಾರವಾಹಿಯನ್ನು ಸಂಜೀವ್‌ ತಗಡೂರು ನಿರ್ದೇಶಿಸುತ್ತಿದ್ದಾರೆ. ಅನಾಥ ಹೆಣ್ಣುಮಗಳೊಬ್ಬಳು ಅನಿವಾರ್ಯವಾಗಿ ತುಂಬು ಕುಟುಂಬ ಸೇರಿಕೊಂಡಾಗ ಆಕೆ ಅನುಭವಿಸುವ ಸುಖ-ದುಃಖ, ಯಾತನೆ ಸೇರಿದಂತೆ ಅನೇಕ ಏರಿಳಿತಗಳು ಈ ಧಾರಾವಾಹಿಯ ಪ್ರಧಾನ ಅಂಶಗಳು.

ಇದೊಂದು ಅವಿಭಕ್ತ ಕುಟುಂಬದ ಕಾನ್ಸೆಪ್ಟ್ನಡಿ ತಯಾರಾಗುತ್ತಿರುವ ಧಾರಾವಾಹಿಯಾಗಿದ್ದು, ಪ್ರತಿ ದಿನ 20ಕ್ಕೂ ಹೆಚ್ಚು ಕಲಾವಿದರು ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರಂತೆ. ಈ ಧಾರಾವಾಹಿಯಲ್ಲಿ ಶರತ್‌ ಹಾಗೂ ರಕ್ಷಾ ಗೌಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಶ್ರೀಧರ್‌ ಹೆಗಡೆ ಈ ಧಾರಾವಾಹಿಯ ನಿರ್ಮಾಪಕರು. 

Advertisement

Udayavani is now on Telegram. Click here to join our channel and stay updated with the latest news.

Next