ಲಕ್ನೋ: ಮಹಾರಾಷ್ಟ್ರದಲ್ಲಿ ಸಾಧುಗಳ ಹತ್ಯೆ ನಡೆದ ಬೆನ್ನಲ್ಲೇ, ಉತ್ತರ ಪ್ರದೇಶದಲ್ಲಿ ಮತ್ತೆ ಇಬ್ಬರು ಸಾಧುಗಳನ್ನು ಸೋಮವಾರ ಮಧ್ಯ ರಾತ್ರಿ ಬರ್ಬರವಾಗಿ ಕೊಲೆಗೈಯ್ಯಲಾಗಿದೆ. ಬುಲಂದ್ ಶಹರ್‌ನ ದೇಗುಲವೊಂದರಲ್ಲಿ ಮಲಗಿದ್ದ ಸಾಧುಗಳನ್ನು, ಕಳ್ಳತನದ ಆರೋಪ ಹೊತ್ತಿದ್ದ ವ್ಯಕ್ತಿಯೊಬ್ಬ ಚೂಪಾದ ಆಯುಧಗಳಿಂದ ಹತ್ಯೆ ಮಾಡಿದ್ದಾನೆ.
ಮೃತ ಸಾಧುಗಳನ್ನು ಜಗನ್‌ದಾಸ್ ಮತ್ತು ದೇವದಾಸ್ ಎಂದು ಗುರುತಿಸಲಾಗಿದ್ದು, ಆರೋಪಿ ರಾಜುವನ್ನು ಬಂಧಿಸಲಾಗಿದೆ. ಭಾಂಗ್ ಸೇವಿಸಿದ ಅಮಲಿನಲ್ಲಿದ್ದ ಆರೋಪಿ, ಹತ್ಯೆಗೈದ ಸ್ಥಳದಿಂದ 2 ಕಿ.ಮೀ. ದೂರದಲ್ಲಿ, ಅರೆಪ್ರಜ್ಞಾ ವಸ್ಥೆಯಲ್ಲಿ ಪತ್ತೆಯಾಗಿದ್ದಾನೆ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಮತ್ತು ಸಮಗ್ರ ವರದಿ ಸಲ್ಲಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ಕಾರಣ ಏನು?: ಕೆಲ ದಿನಗಳಿಂದ ಸಾಧುಗಳು ಈ ದೇಗುಲದಲ್ಲಿ ವಾಸವಿದ್ದರು. ಇತೀಚೆಗಷ್ಟೇ ರಾಜು, ಸಾಧುಗಳಿಗೆ ಸಂಬಂಧಿಸಿದ ವಸ್ತುಗಳನ್ನು, ದೇಗುಲದ ಹುಂಡಿಯನ್ನು ಕದಿಯಲು ಯತ್ನಿಸಿದ್ದ ಎನ್ನಲಾಗಿದೆ. ಸಾಧುಗಳು ಈ ವೇಳೆ ಬುದ್ಧಿಮಾತು ಹೇಳಿ ಕಳಿಸಿದ್ದರು.
ಇದಕ್ಕೆ ಪ್ರತೀಕಾರವಾಗಿ ಆತ, ಗಾಂಜಾ ಸೇವಿಸಿ ಬಂದು, ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ. ಊರ ಹೊರವಲಯದಲ್ಲಿ ನಶೆಯಿಂದ ಮಲಗಿದ್ದ ಆರೋಪಿಯನ್ನು ಸ್ವತಃ ಗ್ರಾಮಸ್ಥರೇ ಪೊಲೀಸರಿಗೆ ಹುಡುಕಿಕೊಟ್ಟಿದ್ದಾರೆ.
ಪ್ರಿಯಾಂಕಾ ಟ್ವೀಟ್: ‘ಸಾಧುಗಳ ಹತ್ಯೆಯನ್ನು ರಾಜಕೀಯಗೊಳಿಸದೆ, ಆರೋಪಿಗೆ ತಕ್ಕ ಶಿಕ್ಷೆ ಜಾರಿ ಮಾಡಬೇಕು’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಟ್ವೀಟ್ ಮಾಡಿದ್ದಾರೆ.