ತಿರುವನಂತಪುರ: ಕರ್ನಾಟಕಕ್ಕೆ ಇನ್ನೂ ಎರಡು ವಂದೇ ಭಾರತ್ ರೈಲುಗಳ ಸೇವೆ ಸಿಗುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ. ತಿರುವನಂತಪುರದಿಂದ ಕಲ್ಲಿಕೋಟೆ ವರೆಗೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಎ. 25ರಂದು ತಿರುವನಂತಪುರದಲ್ಲಿ ಉದ್ಘಾಟಿಸಲಿದ್ದಾರೆ. ಆ ರೈಲನ್ನು ಕಾಸರಗೋಡು ಮೂಲಕ ಮಂಗಳೂರು ವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಈಗಾಗಲೇ ವ್ಯಕ್ತವಾಗಿದೆ. ಅದು ಶೀಘ್ರದಲ್ಲಿಯೇ ಈಡೇರುವ ಸಾಧ್ಯತೆ ಇದೆ. ಅದು ಪೂರ್ತಿಯಾದರೆ ಕಡಲನಗರಿ ಮಂಗಳೂರಿಗೆ ಕೂಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಲಭ್ಯವಾಗಲಿದೆ. ಅದು ಕೇರಳದ ಮೊದಲ ಸೆಮಿ ಹೈಸ್ಪೀಡ್ ರೈಲೂ ಆಗಲಿದೆ.
ಇದಲ್ಲದೆ ಎರ್ನಾಕುಳಂನಿಂದ ಬೆಂಗಳೂರಿಗೆ ಕೂಡ ವಂದೇ ಭಾರತ್ ರೈಲಿನ ಸೇವೆ ಆರಂಭಿಸುವ ಪ್ರಸ್ತಾವನೆಗಳು ಇವೆ. ಸದ್ಯ ಕರ್ನಾಟಕದಲ್ಲಿ ಚುನಾವಣೆ ನಿಮಿತ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಮೇ 15ರಂದು ಆ ಪ್ರಕ್ರಿಯೆಗಳು ಮುಕ್ತಾಯಗೊಂಡ ಬಳಿಕ ಹೊಸ ರೈಲಿನ ವಿಸ್ತರಣೆ ಬಗ್ಗೆ ತೀರ್ಮಾನ ಆಗುವ ಸಾಧ್ಯತೆಗಳು ಇವೆ. ಸದ್ಯ ಮೈಸೂರು- ಬೆಂಗಳೂರು- ಚೆನ್ನೈ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತಿದೆ.