ರಾಯಚೂರು: ಜಿಲ್ಲೆಯಲ್ಲಿ ಕೋವಿಡ್-19 ಸಾವಿನ ಸರಣಿ ಮುಂದುವರಿದಿದ್ದು, ಶುಕ್ರವಾರ ಮತ್ತಿಬ್ಬರು ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ.
ನಗರದ ಬೇರೂನ್ ಕಿಲ್ಲಾ ನಿವಾಸಿ 50 ವರ್ಷದ ವ್ಯಕ್ತಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು ಕಳೆದ ಮೂರು ದಿನಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಎಲ್ ಬಿಎಸ್ ನಗರದ 51 ವರ್ಷದ ವ್ಯಕ್ತಿ ಸಾರಿ ಪ್ರಕರಣದ ಆಧಾರದ ಮೇಲೆ ಓಪೆಕ್ ಆಸ್ಪತ್ರೆಯ ಐಸೊಲೇಶನ್ ಗೆ ದಾಖಲಿಸಲಾಗಿತ್ತು. ಇಂದು ಮೃತಪಟ್ಟಿದ್ದಾರೆ. ಕೋವಿಡ್ ನಿಯಮಗಳ ಪ್ರಕಾರ ಶವ ಸಂಸ್ಕಾರಕ್ಕೆ ಕ್ರಮಕೈಗೊಳ್ಳಲಾಗಿದೆ.
ಇಂದಿನ ಇಬ್ಬರು ಸೋಂಕಿತರ ಸಾವು ಪ್ರಕರಣದಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಗುರುವಾರ 101 ಕೋವಿಡ್ 19 ಪ್ರಕರಣಗಳು ದೃಢವಾಗಿತ್ತು. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 915ಕ್ಕೆ ಏರಿಕೆಯಾಗಿದೆ.