Advertisement

ನಾಳೆಯಿಂದ ಎರಡು ತಿಂಗಳು ಮೀನುಗಾರಿಕೆಗೆ ರಜೆ

03:12 PM May 31, 2017 | Harsha Rao |

ಮಲ್ಪೆ: ಕರಾವಳಿಯಲ್ಲಿ ಮಳೆಗಾಲ ಇನ್ನೂ ಆರಂಭಗೊಳ್ಳದಿದ್ದರೂ, ಮಾನ್ಸೂನ್‌ನಲ್ಲಿ ಯಾಂತ್ರಿಕ ಮೀನುಗಾರಿಕೆಗೆ ನಿಷೇಧವಿರುವ ಹಿನ್ನಲೆಯಲ್ಲಿ ಇಂದು ಯಾಂತ್ರಿಕ ಮೀನುಗಾರಿಕೆ ಕೊನೆಗೊಳ್ಳುತ್ತದೆ.

Advertisement

ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರು ಮಲ್ಪೆಯಲ್ಲಿ ಈ ಬಾರಿಯೂ ಕೂಡ ಅವಧಿಗೆ ಮೊದಲೇ ಮೀನುಗಾರಿಕಾ ಋತು ಅಂತ್ಯ ಕಂಡಿದೆ. ಒಂದೆಡೆ ಕುಂಠಿತಗೊಂಡ ಮೀನುಗಾರಿಕೆ ಮತ್ತೂಂದೆಡೆ ಬಂದರಿನಲ್ಲಿ ಬೋಟ್‌ ನಿಲ್ಲಿಸಲು ಜಾಗದ ಸಮಸ್ಯೆ, ಇದರಿಂದಾಗಿ ಬೋಟ್‌ ಮಾಲಕರು ನಿಷೇಧ ಅವಧಿಯ ಒಂದು ತಿಂಗಳ ಮೊದಲೇ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಸುರಕ್ಷಿತ ಜಾಗದಲ್ಲಿ ತಮ್ಮ ಬೋಟನ್ನು ಲಂಗರು ಹಾಕಿ ರಜೆ ಸಾರಿದ್ದಾರೆ.  

ಮಲ್ಪೆ ಬಂದರಿನಲ್ಲಿರುವ ಸುಮಾರು 1200 ಆಳಸಮುದ್ರ, 350 ತ್ರಿಸೆವೆಂಟಿ, 130 ಪಸೀìನ್‌ ಹಾಗೂ ಇನ್ನಿತರ ಸಣ್ಣದೋಣಿಗಳು ಸೇರಿದಂತೆ ಎಲ್ಲಾ ಬೋಟುಗಳು ಈಗಾಗಲೇ ದಡ ಸೇರಿವೆ.

ಪ್ರತಿವರ್ಷ ಮಳೆಗಾಲದಲ್ಲಿ ಜೂ.1 ರಿಂದ ಜು.31ರ ವರೆಗೆ ಒಟ್ಟು 61 ದಿನಗಳ ಕಾಲ ಆಳಸಮುದ್ರದಲ್ಲಿ ಯಾಂತ್ರಿಕ ಮೀನುಗಾರಿಕೆಯನ್ನು ನಿಷೇಧಿಸಿ ಸರಕಾರ ಆದೇಶ ಹೊರಡಿಸುತ್ತದೆ. ಸರಕಾರದ ಆದೇಶ ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕೆ ಕಾಯಿದೆ 1986ರಲ್ಲಿ ವಿಧಿಸಲಾದ  ದಂಡನೆ ಮತ್ತು ಒಂದು ವರ್ಷದ ಅವಧಿಗೆ  ಡೀಸೆಲ್‌ ಮೇಲಿನ  ಸಹಾಯಧನ ಪಡೆಯಲು ಅನರ್ಹರಾಗುತ್ತಾರೆ ಎಂದು ಮೀನುಗಾರಿಕಾ ಉಪನಿರ್ದೇಶಕ ಮಹೇಶ್‌ ಕುಮಾರ್‌  ತಿಳಿಸಿದ್ದಾರೆ.

ದೊರೆತ ಮೀನಿನ  ಫಸಲು
ಉಡುಪಿ ಜಿಲ್ಲೆಯಲ್ಲಿ ಈ ಸಾಲಿನಲ್ಲಿ 1,44,525 ಮೆಟ್ರಿಕ್‌ ಟನ್‌ ಪ್ರಮಾಣದ 1,45,644 ಲಕ್ಷ ರೂಪಾಯಿ ಮೌಲ್ಯದ ಮೀನನ್ನು ಹಿಡಿಯಲಾಗಿದ್ದರೆ, ಕಳೆದ ಸಾಲಿನಲ್ಲಿ 1,51,099 ಮೆಟ್ರಿಕ್‌ ಟನ್‌ನ 1,46,366 ಲಕ್ಷ ಮೌಲ್ಯದ ಮೀನನ್ನು ಹಿಡಿಯಲಾಗಿತ್ತು. ಅದೇ ರೀತಿ ಮಂಗಳೂರುನಲ್ಲಿ ಈ ಸಾಲಿನಲ್ಲಿ 1,58,290 ಲಕ್ಷ ರೂಪಾಯಿ ಮೌಲ್ಯದ 1,52,573 ಮೆಟ್ರಿಕ್‌ ಟನ್‌ ಮತ್ತು  ಕಳೆದ ಸಾಲಿನಲ್ಲಿ 1,37,053 ಲಕ್ಷ ಮೌಲ್ಯದ 1,51,458 ಮೆಟ್ರಿಕ್‌ ಟನ್‌ ಮೀನನ್ನು ಹಿಡಿಯಲಾಗಿದೆ.

Advertisement

ಆರ್ಥಿಕ ಗಳಿಕೆಗೆ ಹೊಡೆತ
ಈ ಬಾರಿ ಮೀನುಗಾರರಿಗೆ ಋತು ಪೂರ್ತಿ ಮೀನಿನ ಕ್ಷಾಮ, ದೊರೆತ ಮೀನಿಗೆ ಸರಿಯಾದ ಧಾರಣೆ ಸಿಗದೆ ಅರ್ಥಿಕ ಗಳಿಕೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು ಮೀನುಗಾರರು ಅರ್ಥಿಕ ಸಮಸ್ಯೆಯನ್ನು ಎದುರಿಸುವಂತಾಗಿತ್ತು. ಈ ಮಧ್ಯೆ ಡಿಸೇಲ್‌ ದರ ಹೆಚ್ಚಳವೂ ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.  ಅಂತರಾಷೀrÅಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ ಕಡಿಮೆ ಆದಾಗ ಕೇಂದ್ರ ಸರಕಾರಕ್ಕೆ ಡೀಸೆಲ್‌ ಬೆಲೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡುವ ಅವಕಾಶ ವಿದೆ. ಸರಕಾರವು ದರ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದ ಹೊಡೆತ ಬೀಳುವ ಸಾಧ್ಯತೆ ಇಲ್ಲವಾಗಿತ್ತು ಎನ್ನುತ್ತಾರೆ ಬೋಟ್‌ ಮಾಲಕರು. ಇನ್ನು ಬೋಟಿನ ಬಲೆ, ರೋಪ್‌, ಎಂಜಿನ್‌ ಹಾಗೂ ಇನ್ನಿತರ ಬಿಡಿಭಾಗಗಳ ಮೇಲಿನ ತೆರಿಗೆಯ ಹೆಚ್ಚಳವೂ ಮೀನುಗಾರಿಕಾ ಉದ್ಯಮಕ್ಕೆ ಹೊಡೆತವಾಗಿದೆ.

ಅರ್ಧಕ್ಕೆ ನಿಂತ ಡ್ರಜ್ಜಿಂಗ್‌
ಈಗಿರುವ 2ನೇ ಹಂತದ ಬಂದರಿನ ಬೇಸಿಂಗ್‌ನಲ್ಲಿ  ಹೂಳು ತುಂಬಿಕೊಂಡಿದ್ದರಿಂದ ದೋಣಿಗಳು ದಕ್ಕೆಯೊಳಗೆ ಪ್ರವೇಶಿಸುವಾಗ ಹೂಳಿನಲ್ಲಿ ಸಿಲುಕಿಕೊಳ್ಳುತ್ತದೆ. ದೋಣಿ ಚಲಿಸುವಾಗ ಹೂಳಿಗೆ ಸಿಲುಕಿ ಒಂದಕ್ಕೊಂದು ಢಿಕ್ಕಿಯಾಗಿ ಹಾನಿಯಾಗುತ್ತಿದೆ. ಮಾತ್ರವಲ್ಲದೆ ಕೆಸರು ಎಂಜಿನ್‌ ಒಳಗೆ ಹೊಕ್ಕು ಎಂಜಿನ್‌ ಕೆಟ್ಟು ಹೋಗುವ ಸಾಧ್ಯತೆಯೂ ಹೆಚ್ಚಾಗಿ ನಷ್ಟ ಉಂಟಾಗುತ್ತಿದೆ ಎಂದು ಮೀನುಗಾರರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.  ವರ್ಷದ ಹಿಂದೆ ಡ್ರಜ್ಜಿಂಗ್‌ ಆರಂಭಿಸಿದ್ದರೂ ಋತು ಅಂತ್ಯದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಈ ವರ್ಷ ತಾಂತ್ರಿಕ ಕಾರಣದಿಂದ ಡ್ರಜ್ಜಿಂಗ್‌ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿಲ್ಲ ಎನ್ನಲಾಗಿದೆ.

ಸ್ಥಳಾವಕಾಶವಿಲ್ಲ
ಮಲ್ಪೆ ಬಂದರಿನಲ್ಲಿ ಶೇ. 60ರಷ್ಟು ಬೋಟ್‌ಗಳು ಮಾತ್ರ ಸುರಕ್ಷಿತ ಜಾಗದಲ್ಲಿದ್ದರೆ ಉಳಿದೆಲ್ಲ ಬೋಟ್‌ಗಳನ್ನು ಸ್ಥಳಾವಕಾಶವಿಲ್ಲದೆ ಹೊಳೆಭಾಗ ದಲ್ಲಿ ಕಟ್ಟಿಡಲಾಗಿದೆ. ಈಗಾಗಲೇ ಜಟ್ಟಿ ನಿರ್ಮಾಣದ ಕಾಮಗಾರಿಗಳು ನಡೆಯುತ್ತಿರುವ ಅತ್ಯಂತ ಸುರಕ್ಷಿತ ಪ್ರದೇಶ ಎನ್ನಲಾದ ಕಲ್ಮಾಡಿ ಬೊಬ್ಬರ್ಯ ಪಾದೆಬಳಿ ಯಲ್ಲಿ  ಸುಮಾರು 300 ರಿಂದ 400 ಬೋಟ್‌ಗಳನ್ನು ನಿಲ್ಲಿಸಲು ಅವಕಾಶವಿದೆ. ಆದರೆ ಅಲ್ಲಿಗೆ ಹೋಗುವ ದಾರಿಯಲ್ಲಿ  ಹೂಳು ತುಂಬಿಕೊಂಡಿರುವುದರಿಂದ ಬೋಟನ್ನು ಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು ತಿಳಿಸುತ್ತಾರೆ.

ಮೀನುಗಾರಿಕಾ ಋತು ಈ ಬಾರಿ ನಿರಾಶಾದಾಯಕವಾಗಿದೆ. ಎಲ್ಲ ವಿಧಗಳ‌ಲ್ಲೂ ಮೀನುಗಾರಿಕೆ ಕೈಕೊಟ್ಟಿದೆ. ಬ್ಯಾಂಕಿನ ಸಾಲದ ಕಂತು, ಬಡ್ಡಿ ಕಟ್ಟುವ ಪರಿಸ್ಥಿತಿಯಲ್ಲಿ ನಾವಿಲ್ಲ. ಮುಂದಿನ ಮೀನುಗಾರಿಕೆ ನಡೆಸಲು ಆರ್ಥಿಕ ಹೊಂದಾಣಿಕೆ ಹೇಗೆ ಮಾಡುವುದು ಎಂಬ ಚಿಂತೆ ಉಂಟಾಗಿದೆ.
– ರಮೇಶ್‌ ಕಾಂಚನ್‌ ಬೈಲಕರೆ, ಮೀನುಗಾರ

ಹಿಂದಿನ ಯುಪಿಎ ಸರಕಾರ ಇರುವಾಗ ಮೀನುಗಾರಿಕಾ ಬಂದರುಗಳ ಅಭಿವೃದ್ಧಿ ಕೇಂದ್ರ ಸರಕಾರ ಶೇ.75, ರಾಜ್ಯಸರಕಾರ ಶೇ. 25 ಅನುಪಾತದಲ್ಲಿ ಅನುದಾನವನ್ನು ಒದಗಿಸಲಾಗುತ್ತಿತ್ತು. ಈಗಿನ ಕೇಂದ್ರ ಸರಕಾರ ಅದನ್ನು ಕೇಂದ್ರದ 60, ರಾಜ್ಯದ 40ರ ಅನುಪಾತದಲ್ಲಿ ನೀಡುತ್ತಿರುವುದರಿಂದ ರಾಜ್ಯ ಸರಕಾರಕ್ಕೆ ಇದು ದೊಡ್ಡ ಹೊರೆಯಾಗುತ್ತಿದೆ. ಹಾಗಾಗಿ ಯಾವ ಬಂದರುಗಳ ಅಭಿವೃದ್ಧಿಯೂ ಸಾಧ್ಯವಾಗುತ್ತಿಲ್ಲ. ಕೇಂದ್ರ ಸರಕಾರವು  ಈ ಹಿಂದಿನ ಅನುಪಾತದಂತೆ ಬಂದರುಗಳ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆ ಮಾಡಬೇಕು.
– ಗೋಪಾಲ ಕುಂದರ್‌, 
ಮಲ್ಪೆ ಆಳಸಮುದ್ರ ಮೀನುಗಾರರ ಸಂಘದ ಗೌರವಾಧ್ಯಕ್ಷ

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next