Advertisement
ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ವೈನ್ ಸಗಟು ಮಾರಾಟ ಮಳಿಗೆ (ವೈನ್ ಬೊಟಿಕ್) ನಿರ್ಮಿಸಲು ಸರ್ಕಾರ ಅನುಮತಿ ನೀಡಿದೆ. ರಾಜ್ಯದ 17 ವೈನರಿಗಳಲ್ಲಿ ತಯಾರಿಸಲಾಗುವ ಸುಮಾರು 300ರಿಂದ 400 ವೈನ್ ಬ್ರಾಂಡ್‌ಗಳನ್ನು ಮಾತ್ರ ಈ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತದೆ.
Related Articles
Advertisement
ಯಾವ್ಯಾವ ತಳಿ ದ್ರಾಕ್ಷಿಯ ವೈನ್ ಸಿಗಲಿದೆ?: ವೈನ್ ದ್ರಾಕ್ಷಿಗಳನ್ನು ಬೆಳೆಯುವ ಪ್ರದೇಶಗಳಾದ ನಂದಿ ಕಣವೆಯ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ತುಮಕೂರು. ಕೃಷ್ಣಾ ಕಣಿವೆಯ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್. ಕಾವೇರಿ ಕಣಿವೆಯ ವಿಭಾಗದ ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಹಂಪಿ ಹಿಲ್ಸ್ ವೈನ್ ಪ್ರದೇಶಗಳಾದ ಕೊಪ್ಪಳ,
ಗದಗ, ಬಳ್ಳಾರಿ, ರಾಯಚೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೆಳೆಯುವ ಕೆಂಪು ವೈನ್ ತಳಿಯ ದ್ರಾಕ್ಷಿಗಳಾದ ಕೆಬರ್‌ನೆಟ್ ಸವಿನ್ಯೋ, ಮೆರ್ಲಟ್, ಪಿನೋಟ್ ನಯರ್, ಬ್ಯೂಜೋಲಾಯಿಸ್, ಗ್ರೆನಾಶ್, ಕಿಯಾಂತಿ, ಜಿನ್‌ಫಂಡೆಲ್, ಗೇಮಿ, ಬೋಡೋ, ಸಂಜೊವೇಸ್, ಸಿರಾಜ್, ನೆಬೊಲೊ, ಆಗ್ಲಿಯಾನಿಕೊ, ಬಾರ್ಬರ, ಕೆಬರ್ನೆಟ್‌ಪ್ರಾಂಕ್ ಹಾಗೂ ಬಿಳಿ ವೈನ್ ತಯಾರಿಕೆಗೆ ಬಳಸುವ ಶಾರ್ಡೊನ್ನೆ, ಶೆನಿನ್ ಬ್ಲಾಂಕ್, ಸವಿನ್ಯೊ, ಮಸ್ಕಟ್, ಸೆಮಿಯಾನ್, ಪಿನೊ ಬ್ಲಾಂಕ್, ವಿಯನ್ಯೆ, ಗ್ರುನರ್ ವೆಟಿಸರ್‌ಮ ರಿಸ್ಲಿಂಗ್ ತಳಿಯ ದ್ರಾಕ್ಷಿಗಳಿಂದ ತಯಾರಾದ ವೈನ್‌ಗಳು ಈ ವೈನ್ ಬೊಟಿಕ್‌ಗಳಲ್ಲಿ ಸಿಗಲಿವೆ.
ಒಂದು ಕೋಟಿ ವೈನ್ ಬಾಟಲಿ ಮಾರಾಟ: ಎಲೈಟ್ ವಿಂಟೇಜ್ ವೈನರಿ, ಹಂಪಿ ಹೆರಿಟೇಜ್ ವೈನರಿ, ನಂದಿವ್ಯಾಲಿ ವೈನರಿ, ದಾದಾ ವೈನರಿ, ನಿಸರ್ಗ ವೈನರಿ, ಎಸ್‌ಡಿಯು ವೈನರಿ, ಕೆಆರ್‌ಎಸ್‌ಎಂ ಎಸ್ಟೇಟ್ ವೈನರಿ, ಹೆರಿಟೇಜ್ ಗ್ರೇಪ್ ವೈನರಿ, ಸಿಲಿಕಾನ್ ವ್ಯಾಲಿ ವೈನರಿ ಹೀಗೆ ರಾಜ್ಯದ 17 ವೈನರಿಗಳಲ್ಲಿ ಸುಮಾರು 300ರಿಂದ 400 ವೈನ್ ಬ್ರಾಂಡ್‌ಗಳು ತಯಾರಾಗುತ್ತವೆ. ಪ್ರತಿ ವರ್ಷ ಶೇ.30ರಿಂದ 35ರಷ್ಟು ವೈನ್ ಸೇವಿಸುವವರ ಸಂಖ್ಯೆ ಹೆಚ್ಚುತ್ತಿದೆ.
ವರ್ಷಕ್ಕೆ 75 ಲಕ್ಷ ಲೀಟರ್ ವೈನ್ ಮಾರಾಟವಾಗುತ್ತಿದೆ. 2015-16ನೇ ಸಾಲಿನಲ್ಲಿ 1.33 ಕೋಟಿ ವೈನ್ ಬಾಟಲ್‌ಗಳು ಉತ್ಪಾದನೆಯಾಗಿದ್ದು, 1 ಕೋಟಿಗೂ ಅಧಿಕ ಬಾಟಲ್‌ಗಳು ಮಾರಾಟವಾಗಿವೆ ಎಂದು ಕರ್ನಾಟಕ ದ್ರಾಕ್ಷಾ ರಸ ಮಂಡಳಿ ಮಾಹಿತಿ ನೀಡಿದೆ. ಇದರಿಂದ ಸರ್ಕಾರ ಕಳೆದ ಸಾಲಿನಲ್ಲಿ 250 ಕೋಟಿ ರೂ.ಗಳಿಗೂ ಹೆಚ್ಚು ವಹಿವಾಟು ನಡೆಸಿದೆ ಎನ್ನಲಾಗಿದೆ.
ವೈನ್ ಬೊಟಿಕ್(Boutique) ತೆರೆಯುವವರಿಗೆ ಮಾದರಿಯಾಗಲಿ ಎಂಬ ಉದ್ದೇಶದಿಂದ ಈ ವೈನ್‌ಬೊಟಿಕ್ ಆರಂಭಿಸಲಾಗುತ್ತಿದೆ. ವೈನ್ ಸಂರಕ್ಷಣೆಗೆ ಅನುಕೂಲಕರವಾದ ವಾತಾವರಣ ಸೃಷ್ಟಿಸಲಾಗುವುದು. ವಿವಿಧ ವೈನ್‌ದ್ರಾಕ್ಷಿ ತಳಿಗಳಿಂದ ತಯಾರಾದ ವೈನನ್ನು ಗ್ರಾಹಕರು ಸುಲಭವಾಗಿ ಗುರುತಿಸಲು ಅನುಕೂಲ ಒದಗಿಸಲಾಗುವುದು. ರಾಜ್ಯದ ವೈನರಿಗಳಲ್ಲಿ ತಯಾರಿಸಲಾದ ವೈನ್‌ಗೆ ಮೊದಲ ಆದ್ಯತೆ.– ಟಿ.ಸೋಮು, ವ್ಯವಸ್ಥಾಪಕ ನಿರ್ದೇಶಕ, ವೈನ್ ಬೋರ್ಡ್ * ಸಂಪತ್ ತರೀಕೆರೆ