ಬನಿಹಾಲ್/ಜಮ್ಮು : ಜಮ್ಮು ಕಾಶ್ಮೀರದ ಬನಿಹಾಲ್ ಪಟ್ಟಿಯಲ್ಲಿ ಮೊನ್ನೆ ಬುಧವಾರ ಎಸ್‌ಎಸ್‌ಬಿ ಭದ್ರತಾ ತಂಡದವರ ಮೇಲೆ ನಡೆದಿದ್ದ ದಾಳಿಯಲ್ಲಿ ಶಾಮೀಲಾಗಿದ್ದ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಉಗ್ರ ದಾಳಿಯಲ್ಲಿ ಓರ್ವ ಎಸ್‌ಎಸ್‌ಬಿ ಜವಾನ ಮೃತಪಟ್ಟು ಇನ್ನೋರ್ವ ಗಾಯಗೊಂಡಿದ್ದ. ಈ ಉಗ್ರ ದಾಳಿಯಲ್ಲಿ ಶಾಮೀಲಾಗಿದ್ದ ಗಜ್‌ನಫರ್ ಮತ್ತು ಆರಿಫ್ ಎಂಬ ಇಬ್ಬರು ಉಗ್ರರನ್ನು ಪೊಲೀಸರು ಬಂಧಿಸಿದರು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಬನಿಹಾಲ್ ಪಟ್ಟಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ 24 ತಾಸಿನೊಳಗೆ ಉಗ್ರರಿಬ್ಬರನ್ನು ಸೆರೆ ಹಿಡಿಯಲಾಗಿದೆ; ಅವರಿಂದ ಎರಡು ಸರ್ವಿಸ್ ರೈಫಲ್‌ಗಳು, ಎಕೆ ಅಸಾಲ್ಟ್ ರೈಫಲ್ ವಶಪಡಿಸಿಕೊಳ್ಳಲಾಗಿದೆ; ಇವುಗಳನ್ನು ಈ ಉಗ್ರರು ದಾಳಿಯ ವೇಳೆ ಜವಾನರಿಂದ ಕಸಿದು ಪರಾರಿಯಾಗಿದ್ದರು ಎಂದು ರಾಮಬನ್ ಎಸ್‌ಎಸ್‌ಪಿ, ಮೋಹನ್ ಲಾಲ್ ತಿಳಿಸಿದ್ದಾರೆ.
ಗಜ್‌ನಫರ್ ಮತ್ತು ಆರಿಫ್ ನನ್ನು ಚೀನಾಬ್ ಕಣಿವೆ ಪ್ರದೇಶದಲ್ಲಿ ಭಯೋತ್ಪಾದನೆ ನಡೆಸುವುದಕ್ಕಾಗಿ ನೇಮಕ ಮಾಡಲಾಗಿತು. ಅಕಿಬ್ ವಾಹೀದ್ ಎಂಬ ಇನ್ನೋರ್ವ ಉಗ್ರನ ಜತೆ ಸೇರಿ ಇವರು ಬನಿಹಾಲ್ ಪಟ್ಟಿಯಲ್ಲಿ ಯೋಧರ ಮೇಲೆ ದಾಳಿ ಎಸಗಿದ್ದರು. ದಾಳಿಯ ಬಳಿಕ ಪರಾರಿಯಾಗಿರುವ ವಾಹೀದ್ ಗಾಗಿ ಈಗ ವ್ಯಾಪಕ ಶೋಧ ನಡೆಯುತ್ತಿದೆ ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.
21ರ ಹರೆಯದ ಗಜ್‌ನಫರ್ ಮತ್ತು 22 ಹರೆಯದ ಅಕಿಬ್ ವಾಹೀದ್ ಅನಂತ್‌ನಾಗ್ ಪದವಿ ಕಾಲೇಜಿನಲ್ಲಿ ಬಿಎಸ್‌ಸಿ ವಿದ್ಯಾರ್ಥಿಗಳಾಗಿದ್ದಾರೆ. ಇವರ ಕುಟುಂಬದವರಿಗೆ ಈ ಹಿಂದೆ ಹಿಜ್‌ಬುಲ್ ಮುಜಾಹಿದೀನ್ ನಂಟಿತ್ತು ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.