ಗುವಾಹಟಿ: ಈ ಬಾರಿಯ ಐಪಿಎಲ್ ಕೂಟದ ಎರಡು ಪಂದ್ಯಗಳು ಮೊದಲ ಬಾರಿ ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿವೆ. ಈ ಮೂಲಕ ಐಪಿಎಲ್ ಈಶಾನ್ಯ ಪ್ರದೇಶಕ್ಕೆ ಕಾಲಿಟ್ಟಿದೆ. ಫುಟ್‌ಬಾಲ್ ಪ್ರಿಯ ಈಶಾನ್ಯದ ಅಭಿಮಾನಿಗಳಿಗೆ ಕ್ರಿಕೆಟ್‌ನಲ್ಲೂ ಆಸಕ್ತಿ ಹುಟ್ಟಿಸಲು ಈ ಪಂದ್ಯಗಳು ಉತ್ತೇಜನ ನೀಡುವ ಸಾಧ್ಯತೆಯಿದೆ. ರಾಜಸ್ಥಾನ ರಾಯಲ್ಸ್‌ನ ಎರಡು ತವರಿನ ಪಂದ್ಯಗಳು ಅಸ್ಸಾಂ ಕ್ರಿಕೆಟ್ ಅಸೋಸಿಯೇಶನ್ (ಎಸಿಎ)ನ ಕ್ರೀಡಾಂಗಣದಲ್ಲಿ ನಡೆಯಲಿದೆ. ಏ.5ರಂದು ರಾಜಸ್ಥಾನ್ -ಪಂಜಾಬ್ ಕಿಂಗ್ಸ್ ಮತ್ತು ಏ.8ರಂದು ರಾಜಸ್ಥಾನ್-ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
2020ರಲ್ಲೂ ರಾಜಸ್ಥಾನ್ ರಾಯಲ್ಸ್‌ನ ಎರಡು ಪಂದ್ಯಗಳನ್ನು ಆಯೋಜಿಸಲು ನಮಗೆ ಅವಕಾಶ ನೀಡಲಾಗಿತ್ತು. ಆದರೆ ಕೋವಿಡ್‌ನಿಂದಾಗಿ ಪಂದ್ಯಗಳು ನಡೆದಿರಲಿಲ್ಲ. ಈ ವರ್ಷ ಇಲ್ಲಿ ಎರಡು ಪಂದ್ಯಗಳು ನಡೆಯಲಿರುವುದು ನಮಗೆ ಖುಷಿ ತಂದಿದೆ ಎಂದು ಎಸಿಎ ಕಾರ್ಯದರ್ಶಿ ತ್ರಿದಿಬ್ ಕೊನ್ವಾರ್ ಹೇಳಿದ್ದಾರೆ. ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಎಸಿಎ ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದೆ. ಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಜೈಪುರ ಮೂಲದ ಫ್ರಾಂಚೈಸಿ ಈ ಹಿಂದೆ ಎಸಿಎ ಜತೆ ಪಾಲುದಾರಿಕೆ ಹೊಂದಿತ್ತು. ಕ್ರಿಕೆಟ್ ಅಕಾಡೆಮಿ ಇದೀಗ ಎಸಿಎ ಸ್ಟೇಡಿಯಂನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕಠಿನ ಸ್ಪರ್ಧೆಯಿಂದಾಗಿ ರಾಷ್ಟ್ರೀಯ ತಂಡಕ್ಕೆ ಬರಲು ಸಾಧ್ಯವಾಗದ ಬಹಳಷ್ಟು ಮಹತ್ವಾಕಾಂಕ್ಷಿ ಕ್ರಿಕೆಟಿಗರು ವಿವಿಧೆಡೆ ಇದ್ದಾರೆ ಮತ್ತು ಅವರಿಗೆ ಐಪಿಎಲ್ ಉತ್ತಮ ಅವಕಾಶವಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಸ್ಥಳೀಯ ಹುಡುಗ ರಿಯಾನ್ ಪರಾಗ್ ಮೇಲೆ ಎಲ್ಲರ ದೃಷ್ಟಿ ಇರಲಿದೆ.