Advertisement

ಮತಾಂಧತೆಯ ವಿಷಕ್ಕೆ ಬಲಿಯಾದವು 2 ಜೀವಗಳು

07:35 AM Jan 08, 2018 | Karthik A |

ಮಂಗಳೂರು: ತಮಗೆ ಸಾವಿರ ಕಷ್ಟಗಳಿದ್ದರೂ ಅವರಿಬ್ಬರದು ಪರೋಪಕಾರದಲ್ಲಿ ಎತ್ತಿದ ಕೈ. ಮನೆಗೆ ಮಾಡಿದ ಬ್ಯಾಂಕ್‌ ಸಾಲ ತೀರಿಸಿ ತಮ್ಮದೇ ಆದ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಕನಸು ಹೊತ್ತವರು. ಕಷ್ಟವನ್ನೇ ಮೆಟ್ಟಿ ನಿಂತು ಮನೆಗೆ ಆಧಾರವಾಗಿದ್ದ ಅವರಿಬ್ಬರೂ ದುಷ್ಕರ್ಮಿಗಳಿಂದ ಅಮಾನುಷ ರೀತಿಯಲ್ಲಿ ಹತ್ಯೆಗೀಡಾಗಿ ಇಹಲೋಕ ತ್ಯಜಿಸಿದ್ದಾರೆ. ಬುದ್ಧಿವಂತರ ಜಿಲ್ಲೆ ಎನಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ದಿನಗಳ ಅಂತರದಲ್ಲಿ ನಡೆದಿರುವ ಯುವಕರಿಬ್ಬರ ದಾರುಣ ಸಾವು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಕಾಯುವ ಮಂದಿಯಲ್ಲಿ ಮಾನ ವೀಯ ಅಂತಃಕರಣವೇ ಸತ್ತು ಹೋಗಿದೆಯೇ ಎಂಬ ಪ್ರಶ್ನೆಯನ್ನು ನಾಗರಿಕ ಸಮಾಜದಲ್ಲಿ ಹುಟ್ಟು ಹಾಕಿದೆ.

Advertisement

ಯಾವತ್ತೂ ಧರ್ಮದ ಲೇಬಲ್‌ ಹಚ್ಚಿಕೊಳ್ಳದೆ ತಮ್ಮ ಪಾಡಿಗೆ ತಾವಿದ್ದ ಈರ್ವರ ಜೀವಕ್ಕೂ ಮತಾಂಧರ ಅಟ್ಟಹಾಸ ಎರವಾಗಿದೆ! ಕಾರ್ಯಕ್ರಮವೊಂದರ ಬ್ಯಾನರ್‌ ಕಟ್ಟುವಾಗ ನಡೆದ ಗಲಾಟೆಯ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್‌ ರಾವ್‌ ಅವರನ್ನು ಜ. 3ರಂದು ದುಷ್ಕರ್ಮಿಗಳು ಕಾಟಿಪಳ್ಳದಲ್ಲಿ ಅಮಾನುಷವಾಗಿ ಹತ್ಯೆಗೈದರು. ದೀಪಕ್‌ ಹಿಂದೂವಾದರೂ ತಾನೆಂದೂ ಧರ್ಮದ ಹಣೆಪಟ್ಟಿ ಹಚ್ಚಿಕೊಂಡು ತಿರುಗಾಡಿದವರಲ್ಲ. ಅವರು ಕೆಲಸ ಮಾಡುತ್ತಿದ್ದದ್ದು ಅಬ್ದುಲ್‌ ಮಜೀದ್‌ ಅವರ ಅಂಗಡಿಯಲ್ಲಿ. ಮಜೀದ್‌ ಅವರ ಮನೆಯಲ್ಲಿ ಏನೇ ಕಾರ್ಯಕ್ರಮ ಇದ್ದರೂ ದೀಪಕ್‌ ಅಲ್ಲಿರುತ್ತಿದ್ದರು; ದೀಪಕ್‌ ಮನೆಯ ಕಾರ್ಯಕ್ರಮಗಳಿಗೆ ಮಜೀದ್‌ ತಪ್ಪದೇ ಬರುತ್ತಿದ್ದರು. ಆದರೆ ಇದನ್ನೆಲ್ಲ ಆಲೋಚಿಸುವಷ್ಟು ಮಾನವೀಯವಲ್ಲದ ಮತಾಂಧ ಮನಸ್ಸು ದೀಪಕ್‌ ಅವರನ್ನು ಬಲಿ ತೆಗೆದುಕೊಂಡಿತು.

ದೀಪಕ್‌ ಹತ್ಯೆಗೆ ಪ್ರತೀಕಾರವಾಗಿ ಕೊಟ್ಟಾರ ಚೌಕಿಯಲ್ಲಿ ಫಾಸ್ಟ್‌ಫುಡ್‌ ಅಂಗಡಿ ನಡೆಸುತ್ತಿದ್ದ ಆಕಾಶಭವನದ ಅಬ್ದುಲ್‌ ಬಶೀರ್‌ ಮೇಲೆ ಅದೇ ದಿನ ರಾತ್ರಿ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದರು. ಐದು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಬಶೀರ್‌ ಜ. 7ರಂದು ಕೊನೆಯುಸಿರೆಳೆದರು. ಜಾತಿ-ಧರ್ಮಗಳ ಪರಿವೆಯಿಲ್ಲದೆ ಎಲ್ಲರೊಂದಿಗೆ ಆತ್ಮೀಯತೆ ಇರಿಸಿಕೊಂಡಿ ದ್ದವರು ಬಶೀರ್‌. ದೀಪಕ್‌ ಹತ್ಯೆ ಗೈದಂಥದೇ ಮತಾಂಧ ಮಾನಸಿಕರ ದಾಳಿಗೆ ತಾನೂ ಬಲಿಯಾಗಬಹುದು ಎಂಬ ಸ್ವಪ್ನವನ್ನೂ ಕಂಡಿರಲಿಕ್ಕಿಲ್ಲ. ಆದರೆ ಧರ್ಮಾಂಧತೆಯ ವಿಷ ಮೈದುಂಬಿಕೊಂಡವರು ತಾವು ಆಗೀಗ ಆಹಾರ ಸೇವಿಸಿದ್ದ ಅಂಗಡಿಯ ಮಾಲಕ ಬಶೀರ್‌ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಅವರ ಮೇಲೆ ಅದೇ ದಿನ ದಾಳಿ ಮಾಡಿದರು.

ವಿದೇಶದಲ್ಲಿದ್ದರೆ ಬರುತ್ತಿರಲಿಲ್ಲ ಈ ಮೃತ್ಯು
ಮೃತ ದೀಪಕ್‌ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಬಯಕೆಯನ್ನು ತಾಯಿಯಲ್ಲಿ ಹೇಳಿಕೊಂಡಿದ್ದರು. ಆದರೆ ಆಕೆ ಬೇಡವೆಂದ ಕಾರಣ ಊರಿನಲ್ಲೇ ಸಿಮ್‌ ಲೈನ್‌ ಸೇಲ್‌ ಕೆಲಸ ಮಾಡಿಕೊಂಡಿದ್ದರು. 25 ವರ್ಷಗಳಿಂದ ವಿದೇಶದಲ್ಲಿದ್ದ ಬಶೀರ್‌ ಮನೆ ನೋಡಿಕೊಳ್ಳುವ ಸಲುವಾಗಿ ಊರಿಗೆ ಬಂದಿದ್ದರು. ಜೀವನಾಧಾರಕ್ಕಾಗಿ ಫಾಸ್ಟ್‌ಫುಡ್‌ ಅಂಗಡಿ ನಡೆಸುತ್ತಿದ್ದರು. ಬಹುಶಃ ಈರ್ವರೂ ವಿದೇಶದಲ್ಲಿ ಇರುತ್ತಿದ್ದರೆ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗುವುದು ತಪ್ಪುತ್ತಿತ್ತು ಎನ್ನುತ್ತಾರೆ ಇಬ್ಬರನ್ನು ಹತ್ತಿರದಿಂದ ಬಲ್ಲ ಸ್ನೇಹಿತರು.

‘ಮಾನವೀಯ ಧರ್ಮ’ ಮೆರೆದ ಮಜೀದ್‌, ಶೇಖರ್‌, ರವೂಫ್‌
ದುಷ್ಕರ್ಮಿಗಳ ದಾಳಿಗೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ದೀಪಕ್‌ ಅವರನ್ನು ಆಸ್ಪತ್ರೆಗೆ ಸಾಗಿಸಿ ಬದುಕಿಸುವ ಪ್ರಯತ್ನ ಮಾಡಿದ್ದು ಮಜೀದ್‌. ಬಶೀರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಶೇಖರ್‌. ಈ ಹಿಂದೆ ಬಿ.ಸಿ. ರೋಡ್‌ನ‌ಲ್ಲಿ ದುಷ್ಕರ್ಮಿಗಳಿಂದ ಇರಿತಕ್ಕೊಳಗಾದ ಶರತ್‌ ಅವರನ್ನು ತನ್ನ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದದ್ದು ರವೂಫ್‌. ಮಜೀದ್‌ ಅವರ ಪತ್ನಿ ರಜಿಯಾ ಮೃತ ದೀಪಕ್‌ ಮನೆಗೆ ತೆರಳಿ ಅವರ ತಾಯಿ ಪ್ರೇಮಾರಿಗೆ ಸಾಂತ್ವನ ಹೇಳಿದ್ದಾರೆ. ಇಲ್ಲೆಲ್ಲ ಧರ್ಮ ಮೀರಿದ ಮಾನವೀಯತೆಯ ಎಳೆಯಿದೆ. ಈ ಎಲ್ಲ ಘಟನೆಗಳಲ್ಲಿ ಹಿಂದೂ-ಮುಸ್ಲಿಂ ಎಂದು ಭೇದ ಭಾವ ತೋರದೆ ಸಾವಿನಂಚಿನಲ್ಲಿರುವ ವ್ಯಕ್ತಿಗಳನ್ನು ಬದುಕಿಸಲು ಪ್ರಯತ್ನಿಸಿದ ಮಂದಿಯನ್ನು ನೋಡಿದಾಗ ಜಿಲ್ಲೆಯಲ್ಲಿ ಧರ್ಮಧರ್ಮಗಳ ನಡುವಿನ ಬಾಂಧವ್ಯ ಹೇಗೆ ಗಟ್ಟಿಯಾಗಿದೆ ಎಂಬುದನ್ನು ತಿಳಿಯಬಹುದು. 

Advertisement

ಕೃತ್ಯ ಎಸಗಿದವರು ಯುವಕರು 
ದೀಪಕ್‌ ರಾವ್‌ ಮತ್ತು ಅಬ್ದುಲ್‌ ಬಶೀರ್‌ ಹತ್ಯೆ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿ ದ್ದಾರೆ. ಬಂಧಿತರಲ್ಲಿ ಬಹುತೇಕರು ಬಿಸಿರಕ್ತದ ಯುವಕರು. ಬಶೀರ್‌ ಪ್ರಕರಣದ ಆರೋಪಿಗಳು 20ರಿಂದ 25 ವರ್ಷದ ಆಸುಪಾಸಿನವರು. ಮತಾಂಧತೆಯ ವಿಷ ಕುಡಿಯದೆ ಇರುತ್ತಿದ್ದರೆ ತಮ್ಮ ಮನೆಗೆ ಆಧಾರಸ್ತಂಭವಾಗುವುದರೊಂದಿಗೆ ಬಶೀರ್‌, ದೀಪಕ್‌ ಅವರ ಮನೆಯ ಆಧಾರಸ್ತಂಭಗಳನ್ನೂ ಕೆಡಹುವ ಕೆಳ ಮಟ್ಟಕ್ಕೆ ಇಳಿಯುತ್ತಿರಲಿಲ್ಲ. 

ಸಾಮಾಜಿಕ ತಾಣ ಕೋಮು ಭಾವನೆ ಕೆರಳಿಸದಿರಲಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೂಕ್ಷ್ಮ ಘಟನೆಗಳು ನಡೆದಾಗ ಅವನ್ನು ವೈಭವೀಕರಿಸಿ, ಇಲ್ಲದ್ದನ್ನು ಸೃಷ್ಟಿಸಿ ಸಾಮಾಜಿಕ ತಾಣಗಳಲ್ಲಿ ಹರಿಯಬಿಡುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದ ಸಮಸ್ಯೆಗಳು ವಿಷಮಿಸುತ್ತಿರುವುದನ್ನು ಕಾಣಬಹುದು. ಸಮಾಜದ ಸ್ವಾಸ್ಥ್ಯ ಕೆಡಿಸುವ ಯಾವುದೇ ಘಟನೆಗಳ ಸುದ್ದಿ, ವೀಡಿಯೊ, ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ತತ್‌ಕ್ಷಣಕ್ಕೆ ಹರಿಯಬಿಡುವ ಮುನ್ನ ಪ್ರತಿಯೊಬ್ಬರೂ ಸ್ವತಃ ಯೋಚಿಸಬೇಕು. ಕೋಮು ವೈಷಮ್ಯ, ಋಣಾತ್ಮಕ ಭಾವನೆ ಬೆಳೆಸುವ ಪೋಸ್ಟ್‌ ಗಳನ್ನು ಹರಿಯಬಿಡದಂತಹ ಪ್ರಜ್ಞಾವಂತಿಕೆ ಪ್ರತಿ ನಾಗರಿಕನ ಕರ್ತವ್ಯವಾಗಲಿ.

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next