ಮುಂಬೈ: ರೋಹಿತ್ ಶರ್ಮಾ ನಾಯಕತ್ವದಲ್ಲಿ ಮೊದಲ ಬಾರಿಗೆ ಐಸಿಸಿ ಕೂಟವಾಡುತ್ತಿರುವ ಭಾರತ ತಂಡವು ಟಿ20 ವಿಶ್ವಕಪ್ ಗಾಗಿ ಈಗಾಗಲೇ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದೆ. ಕಾಂಗರೂ ನೆಲದ ಹವಾಮಾನಕ್ಕೆ ಹೊಂದಿಕೊಂಡು ಅಭ್ಯಾಸ ನಡೆಸಲೆಂದು ಕೆಲವು ದಿನಗಳ ಮೊದಲೇ ತಂಡವು ಆಸೀಸ್ ಗೆ ತೆರಳಿದೆ.
ತಂಡದೊಂದಿಗೆ ಇಬ್ಬರು ಎಡಗೈ ವೇಗಿಗಳು ಕೂಡಾ ನೆಟ್ ಬೌಲರ್ ಗಳಾಗಿ ಆಸೀಸ್ ವಿಮಾನವೇರಿದ್ದಾರೆ. ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಗಮನ ಸೆಳೆದಿದ್ದ ಮಹಾರಾಷ್ಟ್ರದ ಎಡಗೈ ಸೀಮರ್ ಮುಖೇಶ್ ಚೌಧರಿ ಮತ್ತು ಸೌರಾಷ್ಟ್ರದ ಚೇತನ್ ಸಕಾರಿಯಾ ಅವರು ಈಗಾಗಲೇ ಟಿ20 ವಿಶ್ವಕಪ್ ಗೆ ನೆಟ್ ಬೌಲರ್ ಗಳಾಗಿ ತಂಡವನ್ನು ಸೇರಿಕೊಂಡಿದ್ದಾರೆ. ಹೆಚ್ಚಿನ ತಂಡಗಳು ಎಡಗೈ ಸೀಮರ್ ಹೊಂದಿರುವುದರಿಂದ ಮುಖೇಶ್ ಮತ್ತು ಚೇತನ್ ತಂಡದೊಂದಿಗೆ ಪ್ರಯಾಣಿಸಿದ್ದಾರೆ.
ಇದನ್ನೂ ಓದಿ:ಹಾಡು.. ಟ್ರೇಲರ್ ಬಳಿಕ.. ಇದೀಗ ವಿತರಣೆಯಲ್ಲೂ ಸದ್ದು ಮಾಡುತ್ತಿದೆ ʻಬನಾರಸ್ʼ
“ಮುಕೇಶ್ ಮತ್ತು ಚೇತನ್ ನಿನ್ನೆ ತಂಡದೊಂದಿಗೆ ತೆರಳಿದ್ದಾರೆ. ಸದ್ಯದ ಪ್ರಕಾರ, ಅವರು ಭಾರತವು ಒಂದೆರಡು ಅಭ್ಯಾಸ ಪಂದ್ಯಗಳನ್ನು ಆಡಬೇಕಾದ ಪರ್ತ್ ಲೆಗ್ ಗಾಗಿ ತಂಡದೊಂದಿಗೆ ಇರುತ್ತಾರೆ” ಎಂದು ವರದಿ ತಿಳಿಸಿದೆ.
ಭಾರತದ ತರಬೇತಿ ವೇಳಾಪಟ್ಟಿಯ ಪ್ರಕಾರ, ಪರ್ತ್‌ನಲ್ಲಿ ಅಕ್ಟೋಬರ್ 8, 9 ಮತ್ತು 12 ರಂದು ಬೆಳಿಗ್ಗೆ 11 ರಿಂದ ಸಂಜೆ 4 ರ ನಡುವೆ ಐದು ಗಂಟೆಗಳ ಕಾಲ ಮೂರು ದಿನಗಳ ಕಠಿಣ ಅಭ್ಯಾಸ ನಡೆಸಲಿದೆ. ಅಕ್ಟೋಬರ್ 10 ಮತ್ತು 13 ರಂದು ಎರಡು ಟಿ20 ಅಭ್ಯಾಸ ಪಂದ್ಯಗಳು ನಡೆಯಲಿವೆ.