ಕುಂದಾಪುರ: ಎರಡು ಪ್ರತ್ಯೇಕ ಕಡೆಗಳಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕರಿಬ್ಬರು ಸಾವನ್ನಪ್ಪಿದ ಘಟನೆ ಆನಗಳ್ಳಿ ಹಾಗೂ ಕಂಡ್ಲೂರು ಸಮೀಪದ ಹಳ್ನಾಡಿನಲ್ಲಿ ಸಂಭವಿಸಿದೆ.
ಆನಗಳ್ಳಿ ಗ್ರಾಮದ ಆನಂದ ಬಿಲ್ಲವ ಅವರ ಸಿಗಡಿ ಕೆರೆಯಲ್ಲಿ ಕೂಲಿ ಕಾರ್ಮಿಕರಾಗಿದ್ದ ಉತ್ತರ ಪ್ರದೇಶ ಮೂಲದ ಗೋಕಿಲ್ ಪ್ರಸಾದ್ (41) ಅವರಿಗೆ ಸಿಡಿಲು ಬಡಿದು, ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನ. 25ರಂದು ಸಂಜೆ 5.30 ರ ಸುಮಾರಿಗೆ ಸಂಭವಿಸಿದೆ.
ಸಿಗಡಿ ಕೆರೆಯಲ್ಲಿ ಕೆಲಸ ಮಾಡಿಕೊಂಡಿದ್ದಾಗ ಏಕಾಏಕಿ ಸಿಡಿಲು ಬಡಿದು ಕುಸಿದು ಬಿದ್ದ ಗೋಕಿಲ್ ಪ್ರಸಾದ್ ಅವರನ್ನು ಜತೆಗಿದ್ದ ರಾಮಾಶ್ರೀ ಹಾಗೂ ಪುತ್ರ ನಾಗೇಶ ಕುಮಾರ್ ಅವರು ಆಸ್ಪತ್ರೆಗೆ ಕರೆದೊಯ್ದರು. ಆದರೆ ರಾತ್ರಿ 7.30 ರ ಸುಮಾರಿಗೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪುತ್ರ ನಾಗೇಶ್ ಕುಮಾರ್ ಅವರು ನೀಡಿದ ದೂರಿನಂತೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳ್ನಾಡು : ವ್ಯಕ್ತಿ ಸಾವು: ಕಂಡ್ಲೂರು ಸಮೀಪದ ಹಳ್ನಾಡು ಹೊಳೆಯ ಮರಳು ಧಕ್ಕೆ ಬಳಿಯ ಶೆಡ್ ಬಳಿ ಕುಳಿತಿದ್ದ ಕಾರ್ಮಿಕ ಉತ್ತರ ಪ್ರದೇಶ ಮೂಲದ ದೀಪ್ ಚಂದ್ (50) ಅವರಿಗೆ ಸಿಡಿಲು ಬಡಿದು, ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ 5 ಗಂಟೆಯ ಸುಮಾರಿಗೆ ಸಂಭವಿಸಿದೆ.
ಇವರು ಹಳ್ನಾಡು ಹೊಳೆ ಸಮೀಪದ ಮರಳು ಧಕ್ಕೆ ಬಳಿಯ ಮನೆ ( ಕಾರ್ಮಿಕರ ಶೆಡ್) ಯಲ್ಲಿ ಸಂಜೆ ಮಾತಾಡುತ್ತಿದ್ದ ವೇಳೆ ಸಿಡಿಲು ಬಡಿದು, ಸಾವನ್ನಪ್ಪಿದರು. ಜತೆಗಿದ್ದವರಿಗೂ ಸಿಡಿಲು ಬಡಿದಿದ್ದು, ಅವರು ತತ್‌ಕ್ಷಣ ನೀರಿಗೆ ಹಾರಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಂದಾಪುರ ಗ್ರಾಮಾಂತರ (ಕಂಡ್ಲೂರು) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.