Advertisement

ಖಾಸಗಿ ಬಸ್‌ ಪಲ್ಟಿ: ಇಬ್ಬರ ಸಾವು

11:36 AM Oct 25, 2021 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ಘಾಟಿ ಕ್ಷೇತ್ರದಲ್ಲಿ ಮದುವೆ ಆರತಕ್ಷತೆ ಮುಗಿಸಿ, ತೊಂಡೆಬಾವಿ ಕಡೆಗೆ ತೆರಳುತ್ತಿದ್ದ ಮದುವೆ ದಿಬ್ಬಣದ ಖಾಸಗಿ ಬಸ್‌ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ, ಇಬ್ಬರು ಸಾವನ್ನಪ್ಪಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಘಾಟಿ ತಿರುವಿನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

Advertisement

ತೊಂಡೆಬಾವಿ ರೈಲ್ವೆ ಸ್ಟೇಷನ್‌ ನಿವಾಸಿ ಶಿವಕುಮಾರ್‌ (55) ಮತ್ತು ಬೆಳಚಿಕ್ಕನಹಳ್ಳಿ ಗ್ರಾಮದ ರಾಮಕೃಷ್ಣರೆಡ್ಡಿ (48) ಮೃತರು. ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಸಮೀಪದ ಬೆಳಚಿಕ್ಕನಹಳ್ಳಿ ಗ್ರಾಮದವರ ಮದುವೆ ಆರತಕ್ಷತೆ ಘಾಟಿ ಸುಬ್ರಹ್ಮಣ್ಯ ದೇವಾಲಯ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ರಾತ್ರಿ ನಡೆದಿತ್ತು.

ಇದಕ್ಕೆ ಗ್ರಾಮದಿಂದ ಖಾಸಗಿ ಬಸ್‌ನಲ್ಲಿ ಮದುವೆ ದಿಬ್ಬಣ ಬಂದಿತ್ತು. ಆರತಕ್ಷತೆ ಮುಗಿಸಿಕೊಂಡು ವಾಪಾಸ್‌ ಊರಿಗೆ ತೆರಳುವ ವೇಳೆ ರಾತ್ರಿ 11 ಗಂಟೆ ಸುಮಾರಿನಲ್ಲಿ ಘಾಟಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಹಳ್ಳಕ್ಕೆ ಉರುಳಿಬಿದ್ದಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ನಾಲ್ವರಿಗೆ ತೀವ್ರ ಪೆಟ್ಟಾಗಿದೆ. ವಿಷಯ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತಡರಾತ್ರಿ 12ಯರವರೆಗೂ ಕಾರ್ಯಾಚರಣೆ ನಡೆಸಿದ್ದು, ಗಾಯಗೊಂಡವರನ್ನು ದೊಡ್ಡಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯಲ್ಲಿ ಶಿವಕುಮಾರ್‌ ಹಾಗೂ ಗೌರಿಬಿದನೂರು ಆಸ್ಪತ್ರೆಗೆ ದಾಖಲಾಗಿದ್ದ ರಾಮಕೃಷ್ಣರೆಡ್ಡಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಘಟನೆ ವೇಳೆ ಬಸ್‌ನಲ್ಲಿ ವೃದ್ಧರು, ಮಕ್ಕಳು ಸೇರಿ ಸುಮಾರು 30 ಮಂದಿ ಇದ್ದು, ಐದಾರು ಮಂದಿಯ ಕೈಕಾಲುಗಳು ಬಸ್‌ನಡಿಯಲ್ಲಿ ಸಿಲುಕಿ ಕೊಂಡಿತ್ತು, ಕೂಡಲೆ ಸಮೀಪದ ರೆಸಾರ್ಟ್‌ ನಿಂದ ಜೆಸಿಬಿ ತರಿಸಿ ಸಿಲುಕಿಕೊಂಡಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿ ಶಶಾಂಕ್‌ ಉದಯವಾಣಿಗೆ ತಿಳಿಸಿದ್ದಾರೆ.

ಖಾಸಗಿ ಬಸ್‌ ಪಲ್ಟಿ: ಇಬ್ಬರ ಸಾವು

Advertisement

ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಟಿ.ವೆಂಕಟರಮಣಯ್ಯ: ಮದುವೆ ಬಸ್‌ ಅಪಘಾತದ ಕುರಿತು ಮಾಹಿತಿ ಪಡೆದ ಶಾಸಕ ಟಿ.ವೆಂಕಟರಮಣಯ್ಯ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿ, ಅತಂಕಕ್ಕೆ ಒಳಗಾಗದಂತೆ ಧೈರ್ಯ ತುಂಬಿದರು.

ವರದಾನವಾದ ಮೇಕ್‌ ಶಿಫ್ಟ್ ಆಸ್ಪತ್ರೆ: ಕೋವಿಡ್‌ ಸೋಂಕಿನ ಚಿಕಿತ್ಸೆಗೆಂದು ನಿರ್ಮಿಸಲಾದ ಮೇಕ್‌ಶಿಫ್ಟ್ ಆಸ್ಪತ್ರೆ, ಅಪಘಾತದಲ್ಲಿ ಗಾಯಗೊಂಡವರನ್ನು ದಾಖಲಿಸಿ ಚಿಕಿತ್ಸೆ ನೀಡಲು ವರದಾನವಾಗಿದೆ. ಈ ಆಸ್ಪತ್ರೆ ಯಲ್ಲಿ ಅಪಘಾತದಲ್ಲಿ ಗಾಯಗೊಂಡ ಸುಮಾರು 24 ಮಂದಿಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್‌, ವೈದ್ಯರಾದ ಡಾ.ಪಾರ್ಥಸಾರಥಿ, ಡಾ.ರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next