ಪ್ಯಾರಿಸ್ ಒಲಿಂಪಿಕ್ಸ್, 2024 ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಿಗದಿಯಾಗಿದ್ದು, ವರ್ಣ ರಂಜಿತ ಕ್ರೀಡಾಲೋಕ ಅನಾವರಣಗೊಳ್ಳಲಿದೆ. ಅತಿ ದೊಡ್ಡ ಕ್ರೀಡಾಕೂಟಕ್ಕೆ ಉಗ್ರರ ದಾಳಿಯ ಭೀತಿಯೂ ಇದ್ದು ಪ್ಯಾರಿಸ್ ನಾದ್ಯಂತ ಹಿಂದೆಂದೂ ಕಾಣದ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗೆ ಫ್ರಾನ್ಸ್ ನೊಂದಿಗೆ ಭಾರತದ ಯೋಧರು ಕೈಜೋಡಿಸಿದ್ದು ತಂಡದಲ್ಲಿ ತರಬೇತಾದ ಎರಡು ಶ್ವಾನಗಳು ಕೆಲಸ ಮಾಡುತ್ತಿವೆ.
ಪ್ಯಾರಿಸ್ ನ ಕ್ರೀಡಾ ಗ್ರಾಮದ ವಿವಿಧ ಸ್ಥಳಗಳಲ್ಲಿ ಭದ್ರತೆ ಒದಗಿಸುವ ಸಲುವಾಗಿ ಆಯ್ಕೆ ಮಾಡಲಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಎರಡು K9 ತಂಡಗಳು ಜುಲೈ 10 ರಂದು ಪ್ಯಾರಿಸ್‌ಗೆ ತೆರಳಿದ್ದು ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿವೆ.
K9 ನ ತಂಡದಲ್ಲಿ ಗಮನ ಸೆಳೆಯುವ ವಾಸ್ಟ್ ಮತ್ತು ಮತ್ತು ಡೆನ್ ಬೈ ಎನ್ನುವ ತರಬೇತಾದ ಎರಡು ಶ್ವಾನಗಳೂ ಇವೆ. ಬೆಲ್ಜಿಯನ್ ಶೆಫರ್ಡ್ ಮಾಲಿನೋಯಿಸ್ ತಳಿಯ ಶ್ವಾನಗಳಿಗೆ ಕ್ರಮವಾಗಿ 5 ಮತ್ತು 3 ವರ್ಷ ವಯಸ್ಸು. CRPF ಬಳಸಿಕೊಳ್ಳುತ್ತಿರುವ ಈ ಶ್ವಾನಗಳು ತರಬೇತಿ ಶಾಲೆಯಲ್ಲಿ ಕಠಿನ ಕಟ್ಟುನಿಟ್ಟಾದ ಪರೀಕ್ಷೆಗಳು ನಡೆದ ಬಳಿಕ ತಂಡಕ್ಕೆ ಆಯ್ಕೆಯಾಗಿವೆ.
2011 ರಲ್ಲಿ ಪಾಕಿಸ್ಥಾನದಲ್ಲಿ ಒಸಾಮಾ ಬಿನ್ ಲಾಡೆನ್‌ನ ಅಡಗುತಾಣದ ಮೇಲೆ ಅಮೆರಿಕ ನಡೆಸಿದ ರಣ ರೋಚಕ ದಾಳಿಯ ವೇಳೆ ಬೆಲ್ಜಿಯನ್ ಶೆಫರ್ಡ್ ಮಾಲಿನೋಯಿಸ್ ನಾಯಿಯ ಸಾಹಸವು ರಾತ್ರೋರಾತ್ರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಳಿಗೆ ದೊಡ್ಡ ಖ್ಯಾತಿ ಮತ್ತು ಬೇಡಿಕೆ ಹೆಚ್ಚು ಮಾಡಿತ್ತು. ಈಗ ವಿಶ್ವದ ವಿವಿಧ ದೇಶಗಳಲ್ಲಿ ಮಿಲಿಟರಿ ಮತ್ತು ಪೊಲೀಸರು ಬಳಸಿಕೊಳ್ಳುತ್ತಿದ್ದಾರೆ.
ಫ್ರಾನ್ಸ್‌ನ ಭಾರತೀಯ ರಾಯಭಾರಿ ಜಾವೇದ್ ಅಶ್ರಫ್ ಸೋಮವಾರ ಪ್ಯಾರಿಸ್‌ನಲ್ಲಿರುವ ಭಾರತದ ಕೆ -9 (canine) ಘಟಕವನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಶ್ವಾನಗಳೊಂದಿಗೂ ಸಮಯ ಕಳೆದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಶಸ್ತ್ರ ಪಡೆಗಳ ಸಚಿವಾಲಯ (France) ಪ್ರಕಾರ, ಸುಮಾರು ನಲವತ್ತು ವಿದೇಶಿ ಮಿಲಿಟರಿ ಶ್ವಾನ ದಳದ ತಂಡಗಳು ಫ್ರೆಂಚ್ ಪದಾತಿ ದಳದ ಘಟಕದೊಂದಿಗೆ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸುತ್ತಿವೆ.
“ತಂಡಗಳು ವಿವಿಧ ಸೇವೆಗಳಿಂದ ವೃತ್ತಿಪರ ಘಟಕಗಳಿಂದ ಕೂಡಿದೆ. 132 ನೇ ಪದಾತಿ ದಳವು ಹೆಚ್ಚಿನ ಯೋಧರನ್ನು ಒದಗಿಸುತ್ತದೆ ”ಎಂದು ಸಚಿವಾಲಯ ಹೇಳಿದೆ.
ಉಗ್ರರ ಬೆದರಿಕೆಯನ್ನು ಎದುರಿಸಲು ಭದ್ರತಾ ತಂಡಗಳಿಗೆ ಸಹಾಯ ಮಾಡಲು ಸ್ಫೋಟಕಗಳನ್ನು ಪತ್ತೆಹಚ್ಚುವ ಸಾಧ್ಯತೆಗಳನ್ನು ಹೆಚ್ಚಿಸಲು ತರಬೇತಾದ ನಾಯಿಗಳನ್ನು ಬಳಸಲಾಗುತ್ತಿದೆ. ಈ ಘಟಕಗಳನ್ನು ಫ್ರಾನ್ಸ್‌ನಾದ್ಯಂತ ನಿಯೋಜಿಸಲಾಗುತ್ತಿದೆ.
ಪ್ಯಾರಿಸ್ ಪೊಲೀಸ್ ಮುಖ್ಯಸ್ಥ ಲಾರೆಂಟ್ ನುನೆಜ್ ಅವರು ಸುದ್ದಿಗೋಷ್ಠಿಯಲ್ಲಿ ಕ್ರೀಡಾಕೂಟಕ್ಕೆ ಸಂಬಂಧಿಸಿ ಮಾತನಾಡಿದ್ದು “ನಾವು ಉಗ್ರರ ಬೆದರಿಕೆಯ ಬಗ್ಗೆ ಕಳವಳ ಹೊಂದಿದ್ದೇವೆ, ವಿಶೇಷವಾಗಿ ಇಸ್ಲಾಮಿಕ್ ಉಗ್ರವಾದಿಗಳು, ಪ್ಯಾಲೆಸ್ಟೀನಿಯನ್ ಪರ ಚಳವಳಿಯಿಂದ ಕಡಿಮೆ-ತೀವ್ರತೆಯ ಬೆದರಿಕೆಯ ಬಗ್ಗೆಯೂ ನಾವು ವಿಶೇಷ ಕಾಳಜಿ ವಹಿಸುತ್ತೇವೆ” ಎಂದು ಹೇಳಿದ್ದಾರೆ.
ಸೀನ್ ನದಿ ದಡದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ 45,000 ಸಶಸ್ತ್ರ ಪೊಲೀಸರು ಸೇರಿದಂತೆ ತಲಾ 30,000 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ಸೇನೆಯ 18,000 ಯೋಧರು ಪೊಲೀಸರೊಂದಿಗೆ ಭದ್ರತೆ ಕೈಗೊಳ್ಳಲಿದ್ದಾರೆ ಎಂದು ವಿವರಗಳು ಲಭ್ಯವಾಗಿವೆ.
2024 ರ ಪ್ಯಾರಿಸ್ ಒಲಿಂಪಿಕ್ಸ್ ಅಧಿಕೃತ ವೆಬ್‌ಸೈಟ್ ಪ್ರಕಾರ, ಸುಮಾರು 2,900 ಕ್ರೀಡಾಪಟುಗಳು 206 ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳು ಮತ್ತು IOC ನಿರಾಶ್ರಿತರ ಒಲಿಂಪಿಕ್ ತಂಡದಿಂದ (EOR) ಭಾಗವಹಿಸುತ್ತಿದ್ದಾರೆ.