ಕೋಲಾರ: ಜೆಡಿಎಸ್ ಪಕ್ಷದ ಇಬ್ಬರು ಶಾಸಕರು ಕಾಂಗ್ರೆಸ್‌ಗೆ ಸೇರಲು ಪಕ್ಷದ ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಶುಕ್ರವಾರ ಸ್ಫೋಟಕ ಹೇಳಿಕೆ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬೆನ್ನಲ್ಲೇ, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಚರ್ಚಿಸಲು ಸಿಎಂ ಮನೆಗೆ ಹೋಗಿದ್ದು ನಿಜ. ಆದರೆ, ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಹೋಗುವ ದುಸ್ಥಿತಿ ನಮಗೆ ಬಂದಿಲ್ಲ ಎಂದು ಜೆಡಿಎಸ್ ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ ಹಾಗೂ ಸಮೃದ್ಧಿ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆಯೊಂದಕ್ಕೆ ಆಗಮಿಸಿದ್ದ ವೇಳೆ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ, ಶ್ರೀನಿವಾಸಪುರ ಜೆಡಿಎಸ್ ಶಾಸಕ ವೆಂಕಟಶಿವಾರೆಡ್ಡಿ, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಕಾಂಗ್ರೆಸ್ ಸೇರುತ್ತಾರೆ. ಇಬ್ಬರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಜತೆ ಈ ಕುರಿತು ಚರ್ಚೆ ನಡೆಸಿದ್ದಾರೆ. ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಜತೆ ಜೆಡಿಎಸ್ ಶಾಸಕರ ಸೇರ್ಪಡೆ ಬಗ್ಗೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರು ಮಾತನಾಡಿದ್ದಾರೆ ಲೋಕಸಭೆ ಚುನಾವಣೆ ಮುಂಚೆಯೇ ಶಾಸಕ ಸ್ಥಾನಕ್ಕೆ ಇಬ್ಬರೂ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂಬ ಸುದ್ದಿ ಸ್ಫೋಟಿಸಿದ್ದರು.
ಕಾಂಗ್ರೆಸ್‌ಗೆ ಹೋಗಲ್ಲ: ಇದರ ಬೆನ್ನಲ್ಲೇ, ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ ಹಾಗೂ ಸಮೃದ್ಧಿ ಮಂಜುನಾಥ್, ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ನಾವಿಬ್ಬರೂ ಕಾಂಗ್ರೆಸ್‌ಗೆ ಹೋಗುತ್ತೇವೆ ಎಂದು ನೀಡಿರುವ ಹೇಳಿಕೆ ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದರು.
ಶಾಸಕರಾಗಿ ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಬಾರದಾ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಪ್ರಶ್ನಿಸಿದರೆ, ಕ್ಷೇತ್ರದ ಅಭಿವೃದ್ಧಿ ಕುರಿತು ಸಿಎಂ ಭೇಟಿಯಾಗುವ ಪ್ರತಿ ಸಂದರ್ಭದಲ್ಲೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದೇ ಹೋಗಿದ್ದೇನೆ ಎಂದು ಸಮೃದ್ಧಿ ಮಂಜುನಾಥ್ ಸ್ಪಷ್ಟಪಡಿಸಿದರು.