ನವದೆಹಲಿ: ರಾಷ್ಟ್ರ ಧ್ವಜ ಸುಟ್ಟಿರುವುದು ಸೇರಿದಂತೆ ಕರ್ನಾಟಕದಲ್ಲಿ 25ಕ್ಕೂ ಹೆಚ್ಚು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಇಬ್ಬರು ಐಸಿಸ್ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಶುಕ್ರವಾರ ಆರೋಪ ಪಟ್ಟಿ ಸಲ್ಲಿಸಿದೆ.
ಭಾರತೀಯ ದಂಡ ಸಂಹಿತಿಯ ವಿವಿಧ ಸೆಕ್ಷನ್‌ಗಳಡಿ ಶಿವಮೊಗ್ಗದ ಮಾಜ್ ಮುನೀರ್ ಅಹ್ಮದ್(23) ಮತ್ತು ಸಯದ್ ಯಾಸಿನ್(22) ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಜಾರ್ಜ್‌ಶೀಟ್ ಸಲ್ಲಿಕೆಯಾಗಿದೆ.
ಈ ಕುರಿತು ಮಾಹಿತಿ ನೀಡಿದ ಎನ್‌ಐಎ ಅಧಿಕಾರಿಯೊಬ್ಬರು, “ಆರೋಪಿಗಳು ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಮೂಲಕ ನಿಷೇಧಿತ ಐಸಿಸ್ ಉಗ್ರ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಈ ಸಂಬಂಧ ಬಂಧಿತ ಇತರೆ ಆರು ಆರೋಪಿಗಳ ತನಿಖೆ ಪ್ರಗತಿಯಲ್ಲಿದೆ,’ ಎಂದು ಹೇಳಿದರು. ಅವರಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ಸಂಭಾವನೆ ನೀಡಿದ್ದ ಅಂಶವೂ ಬೆಳಕಿಗೆ ಬಂದಿದೆ ಎಂದು ಎನ್‌ಐಎ ಹೇಳಿದೆ.
“ಆನ್‌ಲೈನ್ ಮೂಲಕ ವಿದೇಶಿ ವ್ಯಕ್ತಿಯೊಬ್ಬನ ಪ್ರೇರಣೆಯಿಂದ ಬಿ.ಟೆಕ್ ಪಧವೀಧರರಾದ ಅಹ್ಮದ್ ಮತ್ತು ಯಾಸಿನ್ ಐಸಿಸ್ ಸೇರ್ಪಡೆಯಾದರು. ಸಾರ್ವಜನಿಕ ಆಸ್ತಿ ಹಾಗೂ ಹಿಂದೂ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಮಾಲೀಕತ್ವದ ಗೋದಾಮು, ಬಾರ್‌ಗಳು, ಹಾರ್ಡ್‌ವೇರ್ ಅಂಗಡಿಗಳು, ವಾಹನಗಳು ಹಾಗೂ ಇತರೆ ಆಸ್ತಿಗಳನ್ನು ಗುರಿಯಾಗಿಸಿ ವಿಧ್ವಂಸಕ ಕೃತ್ಯ ನಡೆಸುವಂತೆ ಆತ ಇವರಿಗೆ ಟಾರ್ಗೆಟ್ ನೀಡಿದ್ದ. ಈ ಹಿನ್ನೆಲೆಯಲ್ಲಿ ಇವರು 25ಕ್ಕೂ ಹೆಚ್ಚು ಕೃತ್ಯಗಳನ್ನು ಎಸಗಿದ್ದಾರೆ,’ ಎಂದು ಮಾಹಿತಿ ನೀಡಿದರು.
“ಈ ಇಬ್ಬರು ಆರೋಪಿಗಳು ಶಿವಮೊಗ್ಗ ಜಿಲ್ಲೆಯ ಆಗುಂಬೆ ಮತ್ತು ವರಾಹಿ ನದಿ ಹಿನ್ನೀರಿನ ಅರಣ್ಯ ಪ್ರದೇಶಕ್ಕೆ ತರೆಳಿ, ಅಡಗುತಾಣಗಳನ್ನು ಗೊತ್ತು ಮಾಡಿಕೊಂಡಿದ್ದರು. ಅಲ್ಲದೆ ಅರಣ್ಯದಲ್ಲಿ ಯಾಸಿನ್ ತಾನು ತಯಾರಿಸಿದ ಐಇಡಿಯ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದ. ಇದೇ ವೇಳೆ ತಾನು ಭಾರತ ವಿರೋಧಿ ಎಂದು ಸಾಬೀತುಪಡಿಸಲು ರಾಷ್ಟ್ರ ಧ್ವಜವನ್ನು ಸುಡುವ ವಿಡಿಯೋ ರೆಕಾರ್ಡ್ ಮಾಡಿಕೊಂಡು, ಐಸಿಸ್ ನಾಯಕರಿಗೆ ಕಳುಹಿಸಿದ್ದ,’ ಎಂದು ವಿವರಿಸಿದರು.
“ವಿಧ್ವಂಸಕ ಕೃತ್ಯಗಳಿಗಾಗಿ ಈ ಇಬ್ಬರಿಗೆ ಐಸಿಸ್ ಸಂಘಟನೆಯು ಕ್ರಿಪ್ಟೊ ಕರೆನ್ಸಿ ಮೂಲಕ ಹಣ ಪಾವತಿಸಿತ್ತು. ವಿದೇಶದಿಂದ ಅಹ್ಮದ್ ಖಾತೆಗೆ 1.5 ಲಕ್ಷ ರೂ.ಗೆ ಸಮವಾದ ಕ್ರಿಪ್ಟೊ ಕರೆನ್ಸಿ ಹಾಗೂ ಯಾಸಿನ್ ಸ್ನೇಹಿತನ ಖಾತೆಗೆ 62 ಸಾವಿರ ರೂ.ಗೆ ಸಮವಾದ ಕ್ರಿಪ್ಟೊ ಕರೆನ್ಸಿ ಪಡೆದಿದ್ದರು,’ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.