ಅರ್ಧ ಮುಗಿದ ಕನಸಿಗೆ ಯಾವತ್ತೂ ಕೊನೆ ಇರುವುದಿಲ್ಲ. ಅದು ಕಾಡುತ್ತಲೇ ಇರುತ್ತದೆ. ಪ್ರೇಮವೂ ಅಷ್ಟೇ. ಹೈಸ್ಕೂಲಲ್ಲಿ, ಕಾಲೇಜಲ್ಲಿ ಒಂದು ಮುಗ್ಧ ಪ್ರೇಮವೊಂದು ಅರಳಿಕೊಳ್ಳುತ್ತದೆ. ಅದು ಪ್ರೀತಿಯ ಹೆಸರಲ್ಲಾಗಬಹುದು, ನಗುವಿನ ಕಾರಣದಿಂದಾಗಬಹುದು, ಒಂದು ನೋಟದಿಂದಲೇ ಆಗಬಹುದು. ಆ ಭಾವದ ಕೈ ಹಿಡಿದು ಸಾಗುವವರೆಗೆ ಅದು ಕನಸಿನ ಲೋಕ. ಅಲ್ಲೇ ಅಡ್ಡಾಡುತ್ತಿರಬೇಕು ಅನ್ನಿಸುತ್ತದೆ. ಆದರೆ ಈ ಲೋಕಕ್ಕೆ ಒಂದು ಕೊನೆಯಿದೆ. ಯಾವುದೋ ಒಂದು ತಿರುವಲ್ಲಿ ಹುಡ್ಗನೋ ಹುಡ್ಗಿಯೋ ತಿರುಗಿ ಹೋಗುತ್ತಾರೆ. ಅವನು ತಿರುಗಿದ ಅಂತ ಇವಳು, ಇವಳು ದಾಟಿ ಹೋದಳು ಅಂತ ಅವನೂ ಲೋಕದಿಂದಾಚೆ ನಡೆದುಬಿಡಬಹುದು. ಸಿಂಪಲ್ಲಾಗಿ ಹೇಳುವುದಾದರೆ ಬ್ರೇಕಪ್ ಆಗಬಹುದು.
Advertisement
ಆದರೆ ಪ್ರೀತಿ ಸಾಯುವುದಿಲ್ಲ. ಪ್ರೀತಿಸಿದವರ ನೆನಪು ಸಾಯುವುದಿಲ್ಲ. ಕಾಲೇಜಲ್ಲಿ ಯಾಕೆ ಭಗ್ನ ಪ್ರೇಮದ ಕತೆಗಳು ಇವತ್ತಿಗೂ ಚಾಲ್ತಿಯಲ್ಲಿರುತ್ತದೆ ಅಂದರೆ ಅದಕ್ಕೆ ಇದೇ ಕಾರಣ. ಎಲ್ಲರೊಳಗೊಂದು ಭಗ್ನಗೊಂಡ ಕನಸಿನರಮನೆಯಿದೆ. ಬೇರೆಯವರ ಕತೆಯಲ್ಲಿ ನಾವು ನಮ್ಮ ಕತೆಯನ್ನು ಹುಡುಕುತ್ತೇವೆ. ಅದಕ್ಕೆ ಸಾವಿರ ವರ್ಷ ಕಳೆದರೂ ಆ ಕತೆ ನಡೆದೇ ಇಲ್ಲ ಅನ್ನಿಸಿದರೂ ನಮಗೆ ಇವತ್ತಿಗೂ ರಾಧೆ, ಕೃಷ್ಣ, ದೇವದಾಸ್ ಪಾರ್ವತಿ ಇಷ್ಟವಾಗುತ್ತಾರೆ. ಮನಸ್ಸಲ್ಲಿ ಕೂತಿರುತ್ತಾರೆ.
ಕಾಲೇಜು ಹುಡ್ಗರ ಅಡ್ಡದಲ್ಲಿ ಫೀಲಿಂಗ್ ಹಾಡುಗಳು ಜಾಸ್ತಿ ಕೇಳಿಬರುತ್ತವೆ ಯಾಕೆ? ಹರೆಯದ ಹುಡ್ಗಿ ಸೋನು ನಿಗಮ್ ಹಾಡೋ ಫೀಲಿಂಗ್ ಸಾಂಗನ್ನು ಯಾಕೆ ಇಷ್ಟ ಪಡುತ್ತಾಳೆ? ಮುಕೇಶ್‌ನ ಹಾಡುಗಳನ್ನು ಜನ ಹುಚ್ಚಾಗಿ ಕೇಳುತ್ತಿದ್ದದ್ದು ಯಾಕೆ? ಇವೆಲ್ಲವೂ ಮುಗಿಯದ ಕುತೂಹಲಗಳೇ. ನಮಗೆ ನೋವು ಇಷ್ಟವಾಗುತ್ತದಾ? ಇಲ್ಲ ಅನ್ಸತ್ತೆ. ಆದರೂ ನಾವು ನೋವಿನ ಕತೆಗಳನ್ನೇ, ಹಾಡುಗಳನ್ನೇ ಇಷ್ಟಪಡುತ್ತೇವೆ ಅಂದರೆ ಏನು ಕಾರಣ? ನೋವು ಶಾಶ್ವತವಲ್ಲ. ಕೃಷ್ಣ ಹೊರಟು ಹೋದ ಹತ್ತು ವರ್ಷ ರಾಧೆಗೆ ಅವನ ಸಾಂಗತ್ಯ ತೀವ್ರವಾಗಿ ಕಾಡಿರಬಹುದು. ಆಮೇಲಾಮೇಲೆ ಆ ತೀವ್ರತೆ ಕಮ್ಮಿಯಾಗಿರಬಹುದು. ನಂತರ ಕೃಷ್ಣ ದೂರ ಆಗಿರಬಹುದು. ಆದರೆ ಆ ಭಾವ ಶಾಶ್ವತ. ಒಂದು ಚೆಂದದ ಗಳಿಗೆಯಲ್ಲಿ ರಾಧೆ ತಾನು ಕೃಷ್ಣನ ಕೈ ಹಿಡಿದು ಬೃಂದಾವನದಲ್ಲಿ ಅಡ್ಡಾಡಿದ ಗಳಿಗೆಯನ್ನು ನೆನೆಸಿಕೊಂಡು ನಗುತ್ತಾಳಲ್ಲ, ಆ ಹೊತ್ತಲ್ಲಿ ಅವಳಿಗೆ ಮುಕೇಶನ ಹಾಡು ಬೇಕಾಗಿರಬಹುದೇನೋ. ರಾಧೆ ಪ್ರತಿಯೊಬ್ಬ ಹೆಣ್ಣಿನ ಪ್ರತಿರೂಪ. ಕೃಷ್ಣ ಅರ್ಧ ಮುಗಿದ ಕನಸಿನ ಪ್ರತಿಬಿಂಬ. ಈ ಇಬ್ಬರಲ್ಲಿ ಯಾರು ಯಾರನ್ನು ಕಾಣುತ್ತಾರೆ ಅನ್ನೋದು ಕೊನೆಗೂ ಬಗೆಹರಿಯದ ಕತೆಯೇ. ಹಾಗೆ ಬಗೆ ಹರಿಯದೇ ಇರುವುದೇ ಚೆಂದ. ಅಲ್ಲಿ ಕುತೂಹಲ ಇರುತ್ತದೆ. ಅವರವರ ಚಿತ್ರ ಮನಸ್ಸಲ್ಲಿ ರೂಪುಗೊಳ್ಳುತ್ತಿರುತ್ತದೆ. ಕತೆಯಾಗುತ್ತದೆ. ಆಮೇಲೆ ಬದುಕಾಗುತ್ತದೆ. ಫೀಲಿಂಗ್ ಸಾಂಗುಗಳಲ್ಲಿ ನಮ್ಮ ಹುಡ್ಗ, ಹುಡ್ಗಿàರು ಆ ಸಮಾಧಾನವನ್ನು ಹೊಂದುತ್ತಿರುತ್ತಾರೆ.