ರೆಬಲ್‌ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯದ “ಬ್ಯಾಡ್ ಮ್ಯಾನರ್ಸ್’ ಚಿತ್ರ ಕಳೆದ ತಿಂಗಳು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಅದ್ಧೂರಿಯಾಗಿ ಸೆಟ್ಟೇರಿತ್ತು. “ಅಮರ್’ ಚಿತ್ರದ ಬಳಿಕ ಅಭಿಷೇಕ್ ಅಂಬರೀಶ್ ಅಭಿನಯಿಸುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಸದ್ಯ “ಬ್ಯಾಡ್ ಮ್ಯಾನರ್ಸ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಇದರ ನಡುವೆಯೇ ಇದೀಗ “ಬ್ಯಾಡ್ ಮ್ಯಾನರ್ಸ್’ ಚಿತ್ರತಂಡದ ಕಡೆಯಿಂದ ಹೊಸದೊಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ, “ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಜೊತೆ ಇಬ್ಬರು ಹೀರೋಯಿನ್ಸ್ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರಂತೆ.
ಹೌದು, ಚಿತ್ರತಂಡದ ಮೂಲಗಳ ಮಾಹಿತಿಯಂತೆ, “ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಅಭಿಷೇಕ್ ಜೊತೆಗೆ ನಟಿಯರಾದ ರಚಿತಾ ರಾಮ್ ಮತ್ತು ಪ್ರಿಯಾಂಕಾ ಇಬ್ಬರು ನಾಯಕಿಯರಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. “ಬ್ಯಾಡ್ ಮ್ಯಾನರ್ಸ್’ ಚಿತ್ರದ ಚಿತ್ರೀಕರಣ ಪ್ರಾರಂಭವಾದ ಸುಮಾರು ಹದಿನೈದು ದಿನಗಳ ಬಳಿಕ ಚಿತ್ರತಂಡ ಚಿತ್ರಕ್ಕೆ ಇಬ್ಬರು ನಾಯಕಿಯರನ್ನು ಅಂತಿಮಗೊಳಿಸಿದೆ.
ಈ ಹಿಂದೆ ಅಭಿಷೇಕ್ ಅಂಬರೀಶ್ ಅಭಿನಯದ “ಅಮರ್’ ಚಿತ್ರದಲ್ಲಿ ಗೆಸ್ಟ್ ಅಪೀಯರೆನ್ಸ್‌ನಲ್ಲಿ ಕಾಣಿಸಿಕೊಂಡಿದ್ದ ನಟಿ ರಚಿತಾ ರಾಮ್, ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಇದೀಗ ರಚಿತಾ “ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಅಭಿಷೇಕ್‌ಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಇನ್ನೊಬ್ಬ ನಾಯಕಿಯ ಸ್ಥಾನಕ್ಕೆ ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ನಟಿ ಪ್ರಿಯಾಂಕಾ ಆಯ್ಕೆಯಾಗಿದ್ದಾರೆ. ಸದ್ಯ “ಬ್ಯಾಡ್ ಮ್ಯಾನರ್ಸ್’ ನಾಯಕಿಯರ ಹೆಸರು ಅಂತಿಮಗೊಳಿಸಿರುವ ಚಿತ್ರತಂಡ ಅವರ ಪಾತ್ರದ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಟ್ಟಿಲ್ಲ.
ಇನ್ನು “ಅಮರ್’ ಚಿತ್ರದಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಕಾಣಿಸಿಕೊಂಡಿದ್ದ ಅಭಿಷೇಕ್ ಅಂಬರೀಶ್ “ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಔಟ್ ಆ್ಯಂಡ್ ಔಟ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಬ್ಯಾಡ್ ಮ್ಯಾನರ್ಸ್’ ಚಿತ್ರಕ್ಕೆ ಸೂರಿ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್- ಕಟ್ ಹೇಳುತ್ತಿದ್ದಾರೆ.
ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಅವರೊಂದಿಗೆ ಹಿರಿಯ ನಟಿ ತಾರಾ, ಶರತ್ ಲೋಹಿತಾಶ್ವ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮಂಡ್ಯ, ಮೈಸೂರು ಸುತ್ತಮುತ್ತ ಚಿತ್ರದ ಚಿತ್ರೀಕರಣಕ್ಕೆ ನಡೆಯುತ್ತಿದೆ. ಒಟ್ಟಾರೆ “ಬ್ಯಾಡ್ ಮ್ಯಾನರ್ಸ್’ಗೆ ಹೀರೋಯಿನ್ ಯಾರಾಗಲಿದ್ದಾರೆ ಅನ್ನೋ ಕುತೂಹಲಕ್ಕೆ ಸದ್ಯ ತೆರೆ ಬಿದ್ದಿದ್ದು, ತೆರೆಮೇಲೆ ಅಭಿಷೇಕ್ ಜೊತೆ ಇಬ್ಬರು ಹೀರೋಯಿನ್ಸ್ ಕೆಮಿಸ್ಟ್ರಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ