Advertisement

ಕ್ಷಣದ ಸಿಟ್ಟಿಗೆ ಎರಡು ಕುಟುಂಬಗಳ ಬದುಕೇ ಬೀದಿಗೆ

06:34 AM Feb 03, 2019 | Team Udayavani |

ಅವರಿಬ್ಬರಿಗೂ ಮುಖಪರಿಚಯವೇ ಇಲ್ಲ. ಆದರೆ, ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಒಬ್ಬ ಹತನಾದರೆ, ಘಟನೆ ನಂತರ ಎರಡು ಕುಟುಂಬಗಳ ಭವಿಷ್ಯ ಬರಡಾಗಿದೆ. 2018 ಡಿ.16ರಂದು ಮುಂಜಾನೆ ಕೊಲೆ ನಡೆದಿತ್ತು. ಇದರೊಂದಿಗೆ ಘಟನೆ ನಡೆದ ಕ್ಷಣಕ್ಕೂ ಮೊದಲು ನೆಮ್ಮದಿಯಿಂದಿದ್ದ ಎರಡು ಕುಟುಂಬಗಳ ಬದುಕು, ಮಧ್ಯಾಹ್ನದ ವೇಳೆಗೆ ಅಲ್ಲೋಲ ಕಲ್ಲೋಲವಾಗಿತ್ತು.

Advertisement

ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ, ವ್ಯಕ್ತಿಯೊಬ್ಬರ ಇರಿದು ಕೊಂದ 24 ವರ್ಷದ ಟೆಕ್ಕಿ, ಜೈಲು ಸೇರುವ ದಿನ ಎಣಿಸುತ್ತಿದ್ದಾನೆ. ಮತ್ತೂಂದೆಡೆ ಪತಿಯ ಕೊಂದವನ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳು ಕೂಡ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಇನ್ನೊಂದೆಡೆ ಕೊಲೆ ಆರೋಪಿಯ ವೃದ್ಧ ಪೋಷಕರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಉಡುಪಿ ಜಿಲ್ಲೆಯ ಮಂಜುನಾಥ್‌, ಜೀವನಕ್ಕಾಗಿ ಕಾಂಡಿಮೆಂಟ್ಸ್‌ ನಡೆಸುತ್ತಿದ್ದರು. ಕ್ಷುಲ್ಲಕ ಜಗಳದಲ್ಲಿ ಮಂಜುನಾಥ್‌ ಹತರಾದ ನಂತರ ಕಾಂಡಿಮೆಂಟ್ಸ್‌ ಬಾಗಿಲು ಮುಚ್ಚಿದೆ. ಇಬ್ಬರು ಮಕ್ಕಳ ವಿದ್ಯಾಭ್ಯಾಸ ನೆನೆಗುದಿಗೆ ಬಿದ್ದಿದ್ದು, ಅಂತಿಮ ವರ್ಷದ ಬಿಬಿಎೋದುತ್ತಿದ್ದ ಪುತ್ರ ಮನೋಜ್‌, ಅನಿವಾರ್ಯವಾಗಿ ಕಾಲೇಜು  ತೊರೆದಿದ್ದು, ಕುಟುಂಬ ಕಂಗಾಲಾಗಿದೆ.

“ಅಪ್ಪ ಇಲ್ಲದ ಮೇಲೆ ಕಾಂಡಿಮೆಂಟ್ಸ್‌ ನಡೆಸಿ ಏನು ಮಾಡ್ಲಿ? ಘಟನೆಯಲ್ಲಿ ನನಗೂ ರಿದ ಗಾಯವಾಗಿತ್ತು. ಕೆಲ ದಿನ ಹಿಂದಷ್ಟೇ ಆಸ್ಪತ್ರೆಯಿಂದ ಮನೆಗೆ ಬಂದಿದ್ದೇನೆ. ಜೀವನ ನಡೆಯಬೇಕಲ್ವಾ, ಕಾಲೇಜು ಬಿಟ್ಟು ಕೆಲಸ ಹುಡುಕುತ್ತಿದ್ದೇನೆ’ ಎಂದು ಮನೋಜ್‌ ಬೇಸರ ವ್ಯಕ್ತಪಡಿಸುತ್ತಾನೆ.

ಮಗನ ಆರೈಕೆಯಲ್ಲಿ ವೃದ್ಧ ಪೋಷಕರು: ಮಂಜುನಾಥ್‌ರ ಕೊಲೆ ಆರೋಪಿ ಆಕಾಶಮನ್‌, ಪ್ರತಿಷ್ಠಿತ ಸಂಸ್ಥೆಯಲ್ಲಿ ಟೆಕ್ಕಿಯಾಗಿದ್ದ. ಒಬ್ಬನೇ ಮಗನಾಗಿದ್ದ ಆಕಾಶ್‌ಗೆ ಮದುವೆ ಮಾಡಲು ಹೆತ್ತವರು ಸಿದ್ಧತೆ ನಡೆಸಿದ್ದರು. ಆದರೆ, ಘಟನೆ ವೇಳೆ ಗಾಯಗೊಂಡ ಮಗ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತ ಗುಣವಾದರೆ ಕೊಲೆ ಆರೋಪದಲ್ಲಿ ಪೊಲೀಸರು ಆತನನ್ನು ಬಂಧಿಸುತ್ತಾರೆ. ಮಗನ ಮೂಗು ತುದಿಗೆ ಬಂದ ಅರೆ ಕ್ಷಣದ ಸಿಟ್ಟಿನಿಂದ, ಹೆತ್ತವರ ಕನಸುಗಳು ನುಚ್ಚು ನೂರಾಗಿವೆ.

Advertisement

ಘಟನೆ ಹೇಗಾಯ್ತು?: ಕುರುಬರಹಳ್ಳಿಯ ಪೈಪ್‌ಲೈನ್‌ ರಸ್ತೆಯಲ್ಲಿ ಸಾಯಿ ಕಾಂಡಿಮೆಂಟ್ಸ್‌ ನಡೆಸುತ್ತಿದ್ದ ಮಂಜುನಾಥ್‌, ಡಿ.17ರಂದು ಮುಂಜಾನೆ 5 ಗಂಟೆಗೆ ಬಾಗಿಲು ತೆಗೆದು, ಮಳಿಗೆ ಎದುರಿನ ನೆಲಕ್ಕೆ ನೀರು ಹಾಕುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಬಂದ ಆಕಾಶನ ಬೈಕ್‌ ಸ್ಕಿಡ್‌ ಆಗಿ ಆತ ಕೆಳಗೆ ಬಿದ್ದಿದ್ದಾನೆ. ನೀನು ನೀರು ಹಾಕಿದ್ದರಿಂದಲೇ ಬೈಕ್‌ ಜಾತಿರು ಎಂದು ಮಂಜುನಾಥ್‌ ಜತೆ ಆಕಾಶ್‌ ಜಗಳ ತೆಗೆದಿದ್ದಾನೆ.

ಜಗಳ ತಾರಕಕ್ಕೇರಿ ಇಬ್ಬರೂ ಹೊಡೆದಾಡುವಾಗ ಸ್ಥಳೀಯರು ಜಗಳ ಬಿಡಿಸಿದ್ದಾರೆ. ಜಗಳದ ಭರದಲ್ಲಿ ಆಕಾಶ್‌ ಹೆಲ್ಮೆಟ್‌ ಲ್ಲೇ ಮರೆತುಹೋಗಿದ್ದ. ಜಗಳವಾಡಿ ಸ್ಥಳದಿಂದ ತೆರಳಿದ ಆಕಾಶ್‌, ಅರ್ಧಗಂಟೆ ಬಳಿಕ, ಮರೆತು ಹೋಗಿದ್ದ ಹೆಲ್ಮೆಟ್‌ ಕೊಂಡೊಯ್ಯಲು ಕಾಂಡಿಮೆಂಟ್ಸ್‌ಗೆ ಬಂದಾಗ ಮತ್ತೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ, ಆಕಾಶ್‌ ಚಾಕುವಿನಿಂದ ಮಂಜುನಾಥ್‌ ಎದೆಗೆ ಇರಿದಿದ್ದಾನೆ. ಈ ವೇಳೆ ನೆರವಿಗೆ ಬಂದ ಮಂಜುನಾಥ್‌ರ ಪತ್ನಿ ಹಾಗೂ ಪುತ್ರ ಮನೋಜನ ಕೈ, ಕತ್ತಿಗೆ ಆಕಾಶ್‌ ಇರಿದಿದ್ದಾನೆ.

ಇದರಿಂದ ಸಿಟ್ಟಿಗೆದ್ದ ಮನೋಜ್‌, ಅದೇ ಚಾಕು ಕಿತ್ತುಕೊಂಡು ಆಕಾಶ್‌ನ ಬೆನ್ನು, ತಲೆ ಬಳಿ ಇರಿದಿದ್ದ. ಕೂಡಲೇ ಸ್ಥಳೀಯರ ನೆರವಿನಿಂದ ಮಂಜುನಾಥ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಇತ್ತ ಇರಿತಕ್ಕೊಳಗಾದ ಆಕಾಶ್‌ ಕೂಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣದ ತನಿಖೆ ನಡೆಸುತ್ತಿರುವ ಮಹಾಲಕ್ಷ್ಮೀಪುರ ಠಾಣೆ ಪೊಲೀಸರು, ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಆಕಾಶ್‌ನನ್ನು ಬಂಧಿಸಲು ಸಿದ್ಧರಾಗಿದ್ದು, ಆತನ ಆರೋಗ್ಯ ಸ್ಥಿತಿ, ಬಂಧನ ವಿಳಂಬಕ್ಕೆ ಕಾರಣ ಕುರಿತಂತೆ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸುತ್ತಿದ್ದಾರೆ.

ಇನ್ನೊಂದೆಡೆ, ಮೃತ ಮಂಜುನಾಥ್‌ ಹಾಗೂ ಅವರ ಕುಟುಂಬ ಸದಸ್ಯರು ಆಕಾಶ್‌ ಕೊಲೆಗೆ ಯತ್ನಿಸಿದ್ದಾರೆ ಎಂದು ಆಕಾಶ್‌ನ ತಂದೆ ಪ್ರತಿದೂರು ನೀಡಿದ್ದಾರೆ. ಇದನ್ನು ಆಧರಿಸಿ ಪೊಲೀಸರು ಮಂಜುನಾಥ್‌ ಪತ್ನಿ, ಮಕ್ಕಳ ಮೇಲೆ ಕೊಲೆಯತ್ನ, ಇತರ ಆರೋಪಗಳಡಿ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

* ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next